ಶಿವಮೊಗ್ಗ: ರಾಜ್ಯದ ಎಲ್ಲಾ ಇಲಾಖೆಯ 50 ಕೋಟಿ ರೂ. ಮೇಲ್ಪಟ್ಡ ಕಾಮಗಾರಿಗಳಿಗೆ ಅನುಮೋದನೆ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಒಂದು ಸಮಿತಿ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಕಾಮಗಾರಿಗಳ ಎಸ್ಟಿಮೇಷನ್ನಿಂದಲೇ ಎಲ್ಲಾವೂ ಪ್ರಾರಂಭವಾಗುತ್ತದೆ ಎಂಬ ದೂರಿನ ಹಿನ್ನೆಲೆ ಹಾಗೂ ಯಾರಿಗೆ ಬೇಕೋ ಅವರಂತೆಯೇ ಟೆಂಡರ್ ಕಂಡೀಷನ್ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಒಂದು ಉನ್ಜತ ಮಟ್ಟದ ಸಮಿತಿ ರಚನೆ ಮಾಡಲಾಗುತ್ತಿದೆ ಎಂದರು.
ಈ ಸಮಿತಿಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು, ಹಣಕಾಸು ಇಲಾಖೆಯ ಪರಿಣಿತರು ಹಾಗೂ ಆಯಾ ಇಲಾಖೆಯ ತಾಂತ್ರಿಕ ತಜ್ಞರು ಇರಲಿದ್ದಾರೆ. ಈ ಸಮಿತಿಯನ್ನು ಕೆಟಿಟಿಪಿ ಕಾಯ್ಧೆಯಂತೆಯೇ ರಚನೆ ಮಾಡಲಾಗುವುದು. ಸಮಿತಿ ಎಲ್ಲವನ್ನು ಗಮನಿಸಿ ಅನುಮೋದನೆ ನೀಡುತ್ತದೆ. ಈಗಾಗಲೇ ಇದು ಅಂತಿಮ ಹಂತಕ್ಕೆ ಬಂದಿದ್ದು, ಇನ್ನೊಂದು ವಾರದಲ್ಲಿ ಜಾರಿಗೆ ಬರುತ್ತದೆ.
ಈ ಸಮಿತಿ ಕಾಮಗಾರಿಗೆ 15 ದಿನದ ಒಳಗೆ ಅನುಮೋದನೆ ನೀಡುತ್ತದೆ. ಒಂದು ಸಮಿತಿಗೆ ಒತ್ತಡ ಜಾಸ್ತಿಯಾದರೆ, ಇನ್ನೂಂದು ಸಮಿತಿ ರಚನೆ ಮಾಡಗುತ್ತದೆ. ಈಗ ಇದು ರಾಜ್ಯಮಟ್ಟದ ಸಮಿತಿಯಾಗಿದ್ದು, ಅಗತ್ಯ ಎನಿಸಿದರೆ, ಜಿಲ್ಲಾಮಟ್ಟಕ್ಕೂ ರಚನೆ ಮಾಡಲಾಗುವುದು ಎಂದರು. ಇನ್ನು ಡಿಪಿಆರ್ ಇಲಾಖೆಯವರಿಗೆ ಖಡಕ್ ಸೂಚನೆ ನೀಡಿದ್ದು, ಯಾರು ಸಹ ಮೌಖಿಕ ಕಾಮಗಾರಿ ನಡೆಸದಂತೆ ತಿಳಿಸಿದ್ದೇೆನೆ. ಹಾಗೇನಾದ್ರೂ ಆದರೆ, ಅದಕ್ಕೆ ಆಯಾ ಅಧಿಕಾರಿಗಳೇ ಹೊಣೆಯಾಗಿ ಮಾಡಲಾಗುತ್ತದೆ ಎಂದು ಸಿಎಂ ಎಚ್ಚರಿಕೆ ನೀಡಿದರು.
ಬಿಜೆಪಿ ಶಕ್ತಿ ಶಾಲಿಯಾಗಿದೆ : ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿಶಾಲಿಯಾಗಿದೆ. ಇನ್ನಷ್ಟು ಶಕ್ತಿಶಾಲಿಯಾಗಿಸಲು ನಾವು ಇಲ್ಲಿ ಬಂದು ಸಭೆ ನಡೆಸುತ್ತಿದ್ದೇವೆ. ಜಿಲ್ಲೆಯ ಸಮಸ್ಯೆ ಹಾಗೂ ಪರಿಹಾರದ ಕುರಿತು ಚರ್ಚೆ ನಡೆಸಲಾಗಿದೆ. ಜಿಲ್ಲೆಯಲ್ಲಿನ ಅರಣ್ಯ ಸಮಸ್ಯೆಯ ಕುರಿತು ಮೇ ಮೊದಲ ವಾರದಲ್ಲಿ ಪಶ್ಚಿಮ ಘಟ್ಟ ಸೇರಿದಂತೆ ಎಲ್ಲಾ ಅರಣ್ಯ ಸಮಸ್ಯೆಯ ಕುರಿತು ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಇರಲಿದ್ದಾರೆ. ಇಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಹಾಲಿ ಪ್ರಗತಿಯ ಕಾಮಗಾರಿಗಳಾದ ವಿಮಾನ ನಿಲ್ದಾಣ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ವೀಕ್ಷಣೆ ಮಾಡಲಿದ್ದೇನೆ. ಜೋಗದಲ್ಲಿ ಕಾಮಗಾರಿ ನಡೆಯುತ್ತಿದ್ದು, ಅದನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡುವ ಪ್ರಯತ್ನ ಮಾಡಲಾಗುವುದು. ನಿನ್ನೆ(ಮಂಗಳವಾರ) ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಮಿತಿಯವರು ಭೇಟಿ ಮಾಡಿದ್ದರು. ಕೈಗಾರಿಕೆ ಜತೆಗೆ ಪ್ರವಾಸಿ ತಾಣಗಳ ಅಭಿವೃದ್ದಿಯ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ತಿಂಗಳು ಬೆಂಗಳೂರಿನಲ್ಲಿ ಕೈಗಾರಿಕೋದ್ಯಮಿಗಳ ಸಮಿಟ್ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಗ್ರಾಮೀಣ ಭಾಗದವರ ಅಲೆದಾಟ ಕಡಿಮೆ ಮಾಡಲಾಗುವುದು : ಭೂ ಕಬಳಿಕೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೆಚ್ಚಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಕೃಷಿ ಹಾಗೂ ಮನೆ ನಿರ್ಮಾಣಕ್ಕೆ ಸರ್ಕಾರಿ ಹಾಗೂ ಅರಣ್ಯ ಭೂಮಿ ಒತ್ತುವರಿ ಮಾಡಿದರೂ ಸಹ ಅದನ್ನು ಭೂ ಕಬಳಿಕೆ ಕಾಯ್ದೆಯಡಿ ಕೇಸ್ ಹಾಕಿರುವ ಕುರಿತು ಗಮನಕ್ಕೆ ಬಂದಿದೆ. ಇದರಿಂದ ಮುಂದೆ ಜಿಲ್ಲೆಯಲ್ಲಿ ಕೋರ್ಟ್ ರಚನೆ ಮಾಡಲಾಗುವುದು ಎಂದರು.
ನಮ್ಮ ರಾಜ್ಯ ತೆರಿಗೆ ಸಂಗ್ರಹದಲ್ಲಿ ಮುಂದಿದೆ. ಇದರಿಂದ ಬಜೆಟ್ಗೆ 67,100 ಸಾವಿರ ಕೋಟಿ ರೂ.ಸಾಲ ಮಾಡಬೇಕೆಂದು ಘೋಷಣೆ ಮಾಡಿದರೂ ಸಹ 63,100 ಸಾವಿರ ಕೋಟಿ ರೂ. ಮಾತ್ರ ಸಾಲ ಮಾಡಲಾಗಿದೆ. ಇದರಿಂದ ನಮ್ಮಲ್ಲಿ ಆರ್ಥಿಕ ಶಿಸ್ತು ಬಂದಿದೆ. ತೆರಿಗೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಇನ್ನು ಸಂಪುಟ ಪುನಾರಚನೆ ಹಾಗೂ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಅದು ನಮಗೆ ಬಿಡಿ ನೀವು ತಲೆ ಕೆಡೆಸಿಕೊಳ್ಳಬೇಡಿ.
ರಾಜಕೀಯ ತೀರ್ಮಾನವನ್ನು ಸರಿಯಾದ ಸಮಯಕ್ಕೆ ಮಾಡಬೇಕಾಗುತ್ತದೆ ಎಂದರು. ಇನ್ನು ವಿಐಎಸ್ಎಲ್ ಹಾಗೂ ಎಂಪಿಎಂ ಕುರಿತು ಶಿವಮೊಗ್ಗದಲ್ಲಿ ಚರ್ಚೆ ನಡೆಸಿಲ್ಲ. ಆದರೆ, ಕೇಂದ್ರಕ್ಕೆ ಹೋದಾಗ ಚರ್ಚೆ ನಡೆಸಲಾಗಿದೆ. ಖಾಸಗೀಕರಣಕ್ಕೆ ಟೆಂಡರ್ ಕರೆದರೂ ಇನ್ನೂ ಯಾರು ಬಂದಿಲ್ಲ ಎಂದು ಸಿಎಂ ಹೇಳಿದರು. ಸಮಾಜದಲ್ಲಿ ಎಲ್ಲರೂ ಸಹ ಸಂಯಮದಿಂದ ಇದ್ರೆ ಸಮಾಜದಲ್ಲಿ ಶಾಂತಿ ನೆಲೆಸುತ್ತಿದೆ. ಇದರಿಂದ ಎಲ್ಲಾ ಸಮಾಜದವರು ಸಾಮಾಜಿಕ ಜಾಲತಾಣಗಳಿಂದ ಪ್ರಚೋದನೆಗೆ ಒಳಗಾಗಬಾರದು ಎಂದು ಇದೇ ವೇಳೆ ಸಿಎಂ ಬೊಮ್ಮಾಯಿ ಕರೆ ನೀಡಿದರು.
ಇದನ್ನೂ ಓದಿ: ಡಿಕೆಶಿ ಆತಂಕಕ್ಕೆ ಒಳಗಾಗುವುದು ಬೇಡ, ಕಾನೂನು ಬದ್ಧವಾಗಿ ತನಿಖೆ ನಡೆಯುತ್ತೆ: ಸಿಎಂ ಬೊಮ್ಮಾಯಿ