ಶಿವಮೊಗ್ಗ: ಬಹಿರ್ದೆಸೆಗೆ ಹೋಗಿ 60 ಅಡಿ ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿರುವ ಘಟನೆ ಸೊರಬ ತಾಲೂಕಿನ ಎನ್. ದೊಡ್ಡೇರಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಎನ್. ದೊಡ್ಡೇರಿ ಗ್ರಾಮದ ಹನುಮಂತಪ್ಪ ಎಂಬುವರು ಬಹಿರ್ದೆಸೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ.
ಬಹಿರ್ದೆಸೆಗೆ ಹೋಗಿದ್ದ ಹನುಮಂತಪ್ಪ ಬಹಳ ಹೊತ್ತಾದರೂ ಬಾರದ ಕಾರಣ ಕುಟುಂಬಸ್ಥರು ನೋಡಲು ಹೋದಾಗ ಹನುಮಂತಪ್ಪ ಬಾವಿಗೆ ಬಿದ್ದ ವಿಚಾರ ತಿಳಿದಿದೆ. ತಕ್ಷಣ ಪೊಲೀಸರಿಗೆ ಹಾಗೂ ಅಗ್ನಿಶಾಮಕದಳದವರಿಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಹನುಮಂತಪ್ಪ ಅವರನ್ನು ರಕ್ಷಿಸಿದ್ದಾರೆ.
ಹನುಮಂತಪ್ಪರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರಿಗೆ ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಕೆ. ಮಹಾಬಲೇಶ್ವರ, ಚಾಲಕ ತಂತ್ರಜ್ಞ ಕೆ.ಎನ್. ಪ್ರಶಾಂತ್, ಪ್ರಮುಖ ಅಗ್ನಿಶಾಮಕ ಎಂ.ಆರ್. ಮಂಜುನಾಥ್, ಸಿಬ್ಬಂದಿ ಎನ್.ಜಿ. ಪ್ರದೀಪ್, ಎನ್. ಪರಶುರಾಮಪ್ಪ, ಹೆಚ್.ಎನ್. ಪ್ರಸನ್ನಕುಮಾರ್ ಪಾಲ್ಗೊಂಡಿದ್ದರು.
ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ವೇದಿಕೆ ಮೇಲೆ ಉರುಳಿದ ಲೈಟಿಂಗ್ ಟ್ರೇಸ್: ಈರಣ್ಣ ಕಡಾಡಿ ಪಾರು