ಶಿವಮೊಗ್ಗ: ಮಾಜಿ ಸಿಎಂ ಕುಮಾರಸ್ವಾಮಿಯವರ ಅವಧಿಯಲ್ಲಿ ಆದ ಸಾಲಮನ್ನಾ ಹಣವನ್ನು ಯಡಿಯೂರಪ್ಪ ಸರ್ಕಾರ ಒಂದು ವಾರದೊಳಗೆ ಬಿಡುಗಡೆ ಮಾಡದಿದ್ದರೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಹೆಚ್ ಎಸ್ ಬಸವರಾಜಪ್ಪ ಎಚ್ಚರಿಕೆ ನೀಡಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿ ಅವರು ಸಿಎಂ ಆದ ಅವಧಿಯಲ್ಲಿ ರಾಜ್ಯದಲ್ಲಿ ಅರ್ಹ ರೈತರಿಗೆ ಸಾಲಮನ್ನಾ ಮಾಡಿ ಆದೇಶ ಹೊರಡಿಸಿದ್ದರು. ನಂತರ ಮೈತ್ರಿ ಸರ್ಕಾರ ಪತನವಾಗಿ ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದರು.
ಸಾಲ ಮನ್ನಾ ಕುರಿತು ಸಹಕಾರಿ ಸಚಿವರು, ಸಹಕಾರಿ ಇಲಾಖೆ ಕಾರ್ಯದರ್ಶಿಗಳ ಜೊತೆ ಮಾತನಾಡಿದ್ದು, ಇದೀಗ ಸಾಲ ಮನ್ನಾ ಆಗುವುದಿಲ್ಲ ಎನ್ನುತ್ತಿದ್ದಾರೆ. ಕೂಡಲೇ ಸಾಲ ಮನ್ನಾ ಕುರಿತು ರಾಜ್ಯ ಸರ್ಕಾರ ಒಂದು ನಿರ್ಧಾರ ತೆಗೆದು ಕೊಳ್ಳಬೇಕಿದೆ ಎಂದರು. ರಾಜ್ಯದಲ್ಲಿ 1 ಲಕ್ಷದ 22 ಸಾವಿರ ರೈತರಿಗೆ 350 ಕೋಟಿ ರೂ. ಹಣ ಬಿಡುಗಡೆ ಮಾಡುವುದು ಬಾಕಿ ಇದೆ.
ಇದರಲ್ಲಿ 65 ಸಾವಿರ ರೈತರ ಬ್ಯಾಂಕ್, ಪಾಸ್ಬುಕ್, ಆಧಾರ್ ಕಾರ್ಡ್ ಹೊಂದಾಣಿಕೆಯಾದ ಅರ್ಹ ಫಲಾನುಭವಿಗಳಿಗೆ ಸುಮಾರು 200 ಕೋಟಿ ರೂ. ಹಣ ಬಿಡುಗಡೆ ಮಾಡಬೇಕಿದೆ. ಅದೇ ರೀತಿ ಶಿವಮೊಗ್ಗ ಜಿಲ್ಲೆಯಲ್ಲಿ 3,120 ರೈತರಿಗೆ ಒಟ್ಟು 18 ಕೋಟಿ 35 ಲಕ್ಷ ರೂ. ಬಿಡುಗಡೆಯಾಗಬೇಕಿದೆ.
ಈಗಾಗಲೇ ರೈತರು ಅತಿವೃಷ್ಟಿ, ಅನಾವೃಷ್ಟಿಯಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕಿದೆ ಎಂದು ಹೆಚ್.ಎಸ್. ಬಸವರಾಜಪ್ಪ ತಿಳಿಸಿದರು.