ಶಿವಮೊಗ್ಗ : ಜಿಲ್ಲೆಯ ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯ ಅನುಷ್ಠಾನದಲ್ಲಿ ಲೋಪದೋಷಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ತಪ್ಪಿತಸ್ಥರನ್ನು ತಕ್ಷಣ ಅಮಾನತುಗೊಳಿಸಿ, ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಇಂಧನ ಖಾತೆ ಸಚಿವ ವಿ.ಸುನೀಲ್‌ಕುಮಾರ್ ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಜನೆ ಅನುಷ್ಠಾನದಲ್ಲಿನ ಲೋಪದೋಷಗಳ ಬಗ್ಗೆ ಹಿರಿಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರ ಜ್ಯೋತಿ ಯೋಜನೆ ಫೀಡರ್‌ಗಳ ಅಳವಡಿಕೆ ಸಮರ್ಪಕವಾಗಿ ಆಗಿಲ್ಲ.
224 ಕೋಟಿ ರೂ. ಮೊತ್ತದ ಈ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತಿದೆ. ವಿದ್ಯುತ್ ಕಂಬಗಳನ್ನು ನಿಗದಿತ ಆಳದಲ್ಲಿ ಅಳವಡಿಸದಿರುವುದು, ಸಮರ್ಪಕ ಅರ್ಥಿಂಗ್ ಮಾಡದಿರುವುದು, ಕಾರ್ಮಿಕ ಕಾಯ್ದೆಗಳನ್ನು ಸರಿಯಾಗಿ ಪಾಲನೆ ಮಾಡದಿರುವುದು ಸೇರಿ ವಿವಿಧ ಹಂತಗಳಲ್ಲಿ ಲೋಪದೋಷಗಳು ಕಂಡು ಬಂದಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ತಪ್ಪಿತಸ್ಥ ಇಬ್ಬರು ಎಡಬ್ಲ್ಯೂಇ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸುವಂತೆ ಸೂಚಿಸಲಾಗಿದೆ. ಯೋಜನೆ ಅನುಷ್ಠಾನದ ಕುರಿತು ಸಮಗ್ರ ತನಿಖೆಯನ್ನು ಎಸಿಬಿ ವತಿಯಿಂದ ಅಥವಾ ಇಲಾಖಾ ತನಿಖೆ ನಡೆಸುವ ಕುರಿತು ಪ್ರಧಾನ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಯಾರ ಬಳಿ ಎಂಬಿ ಬುಕ್ ಇಲ್ಲವೋ ಹಾಗೂ ಯಾರು ಕಾಮಗಾರಿ ಪೂರ್ಣವಾಗದೆ ಕಾಮಗಾರಿ ಪೂರ್ಣವಾದ ಬಗ್ಗೆ ಸರ್ಟಿಫಿಕೇಟ್ ನೀಡಿದ ಅಧಿಕಾರಿಗಳನ್ನು 24 ಗಂಟೆಯಲ್ಲಿ ಅಮಾನತು ಮಾಡಬೇಕೆಂದು ಆದೇಶ ನೀಡಿದರು.
68 ಹೊಸ ಫೀಡರ್‌ಗಳ ನಿರ್ಮಾಣ
ಇದಕ್ಕೂ ಮೊದಲು ಇಂಧನ ಸಚಿವರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದರು. ಈ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಶೇ.60ರಷ್ಟು ಕೇಂದ್ರ ಹಾಗೂ ಶೇ.40ರಷ್ಟನ್ನು ಮೆಸ್ಕಾಂ ಭರಿಸುತ್ತದೆ. ಗ್ರಾಮೀಣ ಪ್ರದೇಶದ 11ಕೆವಿ ಮಾರ್ಗಗಳಲ್ಲಿ ಕೃಷಿ ಮತ್ತು ಕೃಷಿಯೇತರ ಸ್ಥಾವರಗಳನ್ನು ಬೇರ್ಪಡಿಸುವುದು, ಗ್ರಾಮೀಣ ಮನೆಗಳ ವಿದ್ಯುದ್ದೀಕರಣ, ಮಾಪಕೀಕರಣವನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತಿದೆ. ಯೋಜನೆಯಡಿ ಹಾಲಿ ಇರುವ 145 ಗ್ರಾಮೀಣ ಫೀಡರ್‌ಗಳ ಕೃಷಿಯೇತರ ಹೊರೆಯನ್ನು ಪ್ರತ್ಯೇಕಿಸಲು 68 ಹೊಸ ಫೀಡರ್‌ಗಳನ್ನು ನಿರ್ಮಿಸಲಾಗಿದೆ.
ಈಗಾಗಲೇ 66 ಫೀಡರ್‌ಗಳನ್ನು ಚಾಲನೆಗೊಳಿಸಲಾಗಿದೆ. 39 ಫೀಡರ್‌ಗಳ ಕಾಮಗಾರಿ ಬಿಲ್ ಪಾವತಿ ಮಾಡಲಾಗಿದೆ. ಇನ್ನುಳಿದ ಬಿಲ್ಲುಗಳ ಪಾವತಿಯನ್ನು ತಡೆ ಹಿಡಿಯಲಾಗಿದೆ ಎಂದು ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಅಶೋಕ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ, ರುದ್ರೇಗೌಡ, ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೆಸ್ಕಾಂ ಎಂಡಿ ಪ್ರಶಾಂತ್ ಕುಮಾರ್ ಮಿಶ್ರಾ ಸೇರಿದಂತೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಅನಾವಶ್ಯಕ ವೆಚ್ಚ ಕಡಿಮೆ ಮಾಡಿ, ಅಧಿಕಾರಿಗಳಿಗೆ ಸಿಎಂ ತಾಕೀತು.. ಒಗ್ಗಟ್ಟಿನಿಂದ ಸವಾಲು ಎದುರಿಸುವ ಅಭಯ