ಶಿವಮೊಗ್ಗ: ತೆರೆಮರೆಯಲ್ಲಿ ಕುಳಿತು ನಗರದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿರುವ ಸಮಾಜಘಾತುಕ ಶಕ್ತಿಗಳನ್ನು ಬುಡಸಮೇತ ಬಗ್ಗು ಬಡಿದು ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತವು ಸಕಲ ರೀತಿಯಲ್ಲೂ ಫೀಲ್ಡಿಗಿಳಿದಿದೆ. ಇದೀಗ ನಗರದಲ್ಲಿ ಡ್ರೋಣ್ ಕ್ಯಾಮರಾಗಳ ಮೂಲಕ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬೆನ್ನಲ್ಲೇ ನಗರದಲ್ಲಿ ಶುರುವಾದ ಹಿಂಸಾಚಾರ ಹಾಗೂ ಗಲಭೆ ಹತ್ತಿಕ್ಕಲು ಈಗಾಗಲೇ ಜಿಲ್ಲಾಡಳಿತವು ಸಿವಿಲ್ ಪೊಲೀಸ್ ಜೊತೆಗೆ ಕೆಎಸ್‌ಆರ್‌ಪಿ, ಡಿಎಆರ್, ಆರ್‌ಎಎಫ್ ತುಕುಡಿಗಳನ್ನು ನಗರಕ್ಕೆ ಕರೆಸಿಕೊಂಡಿದೆ. ರಕ್ಷಣಾ ಪಡೆಯ ಸಿಬ್ಬಂದಿಯನ್ನು ಆಯಕಟ್ಟಿನ ಜಾಗಗಳಿಗೆ ನಿಯೋಜನೆ ಮಾಡಿ, ನಗರದಲ್ಲಿ ಶಾಂತಿ ಕಾಪಾಡಲು ಎಲ್ಲಾ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ಹತ್ಯೆಗೂ ಮುನ್ನ ಹರ್ಷನಿಗೆ ಹುಡುಗಿಯರಿಂದ ವಿಡಿಯೋ ಕಾಲ್: ಕೊಲೆ ರಹಸ್ಯ ಬಿಚ್ಚಿಟ್ಟ ಸ್ನೇಹಿತ
7 ಡ್ರೋಣ್ ಕ್ಯಾಮರಾ: ಇಡೀ ಶಿವಮೊಗ್ಗದ ನಗರದ ಮೇಲೆ ಈಗ ನಿಗಾ ಇರಿಸಲು 7 ಡ್ರೋಣ್ ಕ್ಯಾಮರಾ ಹೊಂದಿರುವ ನಾಲ್ಕು ತಜ್ಞರ ತಂಡಗಳು ನಗರಕ್ಕೆ ಕಾಲಿಟ್ಟಿವೆ. ಎಎನ್ಎಫ್ ಕಾರ್ಕಳ, ಕರಾವಳಿ ರಕ್ಷಣಾ ಪಡೆ, ಮಂಡ್ಯ ಹಾಗೂ ಉತ್ತರ ಕನ್ನಡದಿಂದ ಬಂದಿರುವ ನಾಲ್ಕು ತಂಡಗಳಲ್ಲಿ 20ಕ್ಕೂ ಹೆಚ್ಚು ಪೊಲೀಸರು ಇದ್ದಾರೆ. ಈ ಸಿಬ್ಬಂದಿ 7 ಡ್ರೋಣ್ ಕ್ಯಾಮರಾಗಳನ್ನು ನಿರ್ವಹಿಸಲಿದ್ದಾರೆ. ಯಾವುದೇ ಬೀದಿ, ರಸ್ತೆ ಅಥವಾ ಸಂದಿ-ಗೊಂದಿಗಳಲ್ಲಿ ಕುಳಿತು ಗಲಭೆಗೆ-ದೊಂಬಿಗೆ ಯಾರೇ ಸಿದ್ಧತೆ ನಡೆಸಿದರೂ ಅದನ್ನು ಡ್ರೋನ್ ಕ್ಯಾಮರಾ ಪತ್ತೆ ಹಚ್ಚಲಿದೆ.
ನಗರದ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣದ ಎದುರಿನ ಅಶೋಕ ವೃತ್ತದ ಬಳಿ ಬುಧವಾರ ಬೆಳಗ್ಗೆ ಈ ಡ್ರೋನ್ ಕ್ಯಾಮೆರಾಗಳ ಪ್ರಾಯೋಗಿಕ ಪರಿಶೀಲನೆ ನಡೆಯಿತು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಡ್ರೋಣ್ ಕಾರ್ಯಾಚರಣೆಯ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ: ಹಿಮದಲ್ಲಿ ಸಿಲುಕಿದ್ದ ಗರ್ಭಿಣಿಯನ್ನು ರಕ್ಷಿಸಿದ ಯೋಧರು