ಬೆಂಗಳೂರು: ಶಿವಮೊಗ್ಗ ನಗರದಲ್ಲಿ ಓರ್ವ ಸಚಿವರೇ ಸೆಕ್ಷನ್ 144 ಉಲ್ಲಂಘನೆ ಮಾಡಿದರೂ ಕೂಡ ಏಕೆ ಕೇಸ್ ಹಾಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಬೆಳಿಗ್ಗೆ ಸುದ್ದಿಗಾರರ ಜೊತೆ ಮಾತನಾಡುವ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಮೃತಪಟ್ಟ ಯುವಕನ ಮೃತದೇಹದ ಮೆರವಣಿಗೆ ವೇಳೆ ಗಲಭೆಗೆ ಈಶ್ವರಪ್ಪನವರೇ ಕಾರಣನಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಓರ್ವ ಸಚಿವರೇ ಹಾಗೆಲ್ಲಾ ಮಾಡಿದ ಮೇಲೆ ಯಾಕೆ ಬಿಟ್ಟಿದ್ದೀರಾ? ಅವರೇ ನಿಂತು ಮೆರವಣಿಗೆ ಮಾಡಿಸಿ ಕಲ್ಲು ಹೊಡೆಸಿದ್ರಲ್ವಾ ಈ ಬಗ್ಗೆ ಕೇಸ್ ಯಾಕೆ ಹಾಕಿಲ್ಲ?. ಗೃಹ ಸಚಿವರು ಏನೂ ಹೇಳಲ್ಲ ಬಿಡಿ. ಖಾಕಿ ಬಟ್ಟೆ ಹಾಕಿರುವವರು ಇದಕ್ಕೆ ಉತ್ತರಿಸಬೇಕು. ಇಲ್ಲವೇ ಖಾಕಿ ಕಳಚಿ ಕೇಸರಿ ಹಾಕಲಿ ಎಂದು ಸರ್ಕಾರ ಮತ್ತು ಪೊಲೀಸರು ವಿರುದ್ಧ ಗರಂ ಆದರು.
ಕಳೆದ 5 ದಿನಗಳಿಂದ ನಾವು ಅಹೋರಾತ್ರಿ ಧರಣಿ ನಡೆಸಿದ್ದೇವೆ, ಇಂದೂ ಕೂಡ ನಡೆಸುತ್ತೇವೆ. ಅಧಿವೇಶನ ಮೊಟಕು ಮಾಡ್ತಾರೆ ಅಂತ ತಿಳಿದುಬಂದಿದೆ. ಅಧಿವೇಶನ ಮೊಟಕು ಮಾಡಿದ್ರೆ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಹುಬ್ಬಳ್ಳಿ: ಸೂಕ್ತ ರಸ್ತೆ ಸೌಲಭ್ಯಕ್ಕಾಗಿ ವಕೀಲರ ಪ್ರತಿಭಟನೆ
ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ ಹೊರಗಿನವರ ಸಂಚಿದೆ, ವಿದೇಶದಿಂದ ಬಂದಿದ್ದಾರೆ ಅಂತ ಈಶ್ವರಪ್ಪನವರು ದೂರಿದ್ದಾರೆ. ಎನ್ಐಎ ತನಿಖೆಯಾಗಬೇಕೆಂದು ಹೇಳಿದ್ದಾರೆ. ಪೊಲೀಸರ ಮೇಲೆ ಸಚಿವರಿಗೆ ನಂಬಿಕೆ ಇಲ್ಲ. ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪನವರು ಶಿವಮೊಗ್ಗಕ್ಕೆ ಸೇವೆ ಮಾಡಿದ್ದಾರೆ ಎನ್ನುವುದನ್ನು ಒಪ್ಪುತ್ತೇನೆ. ಆದರೆ ಈ ರೀತಿ ಆದ್ರೆ ಯಾರು ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಮಾಡ್ತಾರೆ. ದಕ್ಷಿಣ ಕನ್ನಡ, ಉಡುಪಿ ಮೇಲೆ ಇದು ಎಷ್ಟು ಪರಿಣಾಮ ಬೀರಿದೆ ಅನ್ನೋದು ಈಗಾಗಲೇ ಗೊತ್ತಾಗಿದೆ. ಈಶ್ವರಪ್ಪ ಜಿಲ್ಲೆಯ ನಾಗರಿಕರನ್ನು ಬದುಕಿದ್ದಂಗೆ ಸಾಯಿಸುತ್ತಿದ್ದಾರೆ. ಈ ಬಗ್ಗೆ ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.