ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗನ ಕಾಯಿಲೆ ನಿಧಾನವಾಗಿ ತನ್ನ ರಕ್ಕಸ ನಾಲಿಗೆಯನ್ನು ಚಾಚುತ್ತಿದೆ. ಈಗಾಗಲೇ ಸಾಗರ ತಾಲೂಕಿನ ಶೀಗೆಬಾಗಿಯಲ್ಲಿನ ಹೊವಮ್ಮ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ ಎಂದು ಡಿಹೆಚ್ಓ ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.
ಸಾಗರ ತಾಲೂಕಿನ ಕಾರ್ಗಲ್, ಅರಳಗೋಡು, ತುಮರಿ- ಬ್ಯಾಕೋಡು ಪ್ರಾಥಮಿಕ ಕೇಂದ್ರಗಳು, ತೀರ್ಥಹಳ್ಳಿಯ ಕನ್ನಂಗಿ, ಮಂಡಗದ್ದೆ ಹಾಗೂ ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ಸಿಬ್ಬಂದಿಯ ಕೊರತೆ ಇಲ್ಲದಂತೆ ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಜ.1 ರಿಂದ ಇಲ್ಲಿಯವರೆಗೂ 254 ಜ್ವರ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 7 ಜನರಲ್ಲಿ ಕೆಎಫ್ಡಿ ಪಾಸಿಟಿವ್ ಬಂದಿದೆ. 5 ಪ್ರಕರಣ ತೀರ್ಥಹಳ್ಳಿ ಹಾಗೂ 2 ಪ್ರಕರಣ ಸಾಗರದಲ್ಲಿ ಕಂಡು ಬಂದಿದೆ. ಈಗಾಗಲೇ ಇಲಾಖೆಯ ಕೆಎಫ್ಡಿಯ ಲಸಿಕೆ ಹಾಗೂ ಡಿಎಂಪಿ ಆಯಿಲ್ ಬಳಕೆಯ ಕುರಿತು ವ್ಯಾಪಕ ಪ್ರಚಾರ ನಡೆಸಿದೆ. ಈಗಾಗಲೇ ಮೃತರಾದ ಹೂವಮ್ಮ ಒಂದೂ ಲಸಿಕೆಯನ್ನು ಹಾಕಿಸಿಕೊಳ್ಳದ ಕಾರಣ ಮೃತರಾಗಿದ್ದಾರೆ.
ಈಗಾಗಲೇ ತುಮರಿ ಭಾಗದಲ್ಲಿ 10 ಕ್ಕೂ ಹೆಚ್ಚು ಲಸಿಕ ಕಾರ್ಯಕ್ರಮ ನಡೆಸಲಾಗಿದೆ. ಆದರೂ ಶೇ 1 ರಷ್ಟು ಜನ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಹಾಕಿಸಿಕೊಂಡರೆ, ಕೂದಲು ಉದುರುತ್ತದೆ, ಕಾಮಾಲೆ ಬರುತ್ತದೆ, ಸೈಡ್ ಎಫೆಕ್ಟ್ ಹೆಚ್ಚಾಗುತ್ತದೆ ಎಂದು ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಲಸಿಕೆಯ ಅರಿವು ಮೂಡಿಸುವ ಕಾರ್ಯ ನಡೆಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಯಾವುದೇ ಜ್ವರ ಪ್ರಕರಣ ಬಂದ್ರು ಸಹ ಅದನ್ನು ತಮ್ಮ ಗಮನಕ್ಕೆ ತರಬೇಕು ಹಾಗೂ ತಕ್ಷಣ ಅವರ ರಕ್ತದ ಮಾದರಿಯನ್ನು ಶಿವಮೊಗ್ಗದ ವಿಡಿಐ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಬೇಕು ಎಂದು ಸೂಚನೆ ನೀಡಲಾಗಿದೆ. ಕೆಎಫ್ಡಿಯ ರಕ್ತದ ಮಾದರಿಯನ್ನು ಶಿವಮೊಗ್ಗದಲ್ಲಿಯೇ ಪರೀಕ್ಷೆ ಮಾಡುವುದರಿಂದ ಬೇಗ ಚಿಕಿತ್ಸೆ ನೀಡಲು ಸಹಾಯಕವಾಗಿದೆ.
ಜಿಲ್ಲೆಯಲ್ಲಿ ಕೆಎಫ್ಡಿಯ ಲಸಿಕೆ ಹಾಗೂ ಡಿಎಂಪಿ ಆಯಿಲ್ ಅಗತ್ಯಕ್ಕೆ ತಕ್ಕಂತೆ ದಾಸ್ತಾನು ಇದೆ. ಈಗಾಗಾಲೇ 5.25 ಲಕ್ಷ ಲಸಿಕೆ ದಾಸ್ತಾನು ಇದ್ದು, ಇದುವರೆಗೂ 2 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಮನವಿ:
ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ಅಥವಾ ಜಿಲ್ಲೆಯ ಯಾವುದೇ ಭಾಗದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬಂದಾಗ ಅವರಿಗೆ ಸರಿಯಾಗಿ ಸ್ಪಂದಿಸಿ, ಅವರ ಬಳಿ ಲಸಿಕೆ ಹಾಗೂ ಡಿಎಂಪಿ ಆಯಿಲ್ ತೆಗೆದುಕೊಂಡು ಬಳಸಿ, ನಿಮ್ಮ ಮನೆಯ ಸುತ್ತ ಸ್ವಚ್ಛತೆ ಇಟ್ಟುಕೊಳ್ಳಿ, ಕಾಡಿಗೆ ಹೋಗುವಾಗ ಡಿಎಂಪಿ ಆಯಿಲ್ ಬಳಸಿ, ಕಾಡಿನಿಂದ ಮನೆಗೆ ಬರುವ ಜಾನುವಾರಗಳನ್ನು ಸ್ವಚ್ಚವಾಗಿಟ್ಟು ಕೊಳ್ಳಲು ಪ್ರಯತ್ನಿಸಿ. ಜಿಲ್ಲೆಯಲ್ಲಿ ನಾಲ್ಕು ಅಂತರ ಜಿಲ್ಲಾ ಮಟ್ಟದ ಕೆಎಫ್ಡಿ ಸಭೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 17 ಮಂಗಳು ಮೃತ ಪಟ್ಟಿದ್ದು, ಇದರಲ್ಲಿ ಯಾವುದು ಕೆಎಫ್ಡಿ ಪಾಸಿಟಿವ್ ಬಂದಿಲ್ಲ ಎಂದರು. ನಮ್ಮ ಜೊತೆ ಅರಣ್ಯ ಇಲಾಖೆ, ಪಶು ಸಂಗೋಪಾನ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಉತ್ತಮವಾಗಿ ಸಂಪರ್ಕದಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.