ಶಿವಮೊಗ್ಗ: ಸುಪ್ರೀಂಕೋರ್ಟ್ ಅನರ್ಹ ಶಾಸಕರ ವಿಚಾರದಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತದೆಯೋ ಯಾರಿಗೂ ಗೊತ್ತಿಲ್ಲ. ಅವರು ಅನರ್ಹರು ಅಂತ ನಾನಲ್ಲ, ದೇವರೇ ಬಂದು ಹೇಳಿದ್ರು ಆಗಲ್ಲ. ಅದನ್ನು ಕೋರ್ಟ್ ತೀರ್ಮಾನ ಮಾಡುತ್ತದೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಹೇಳಿದರು.
ಸುಪ್ರೀಂಕೋರ್ಟ್ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಶಾಸಕರ ರಾಜೀನಾಮೆ ಅಂಗೀಕಾರ ಮಾಡ್ತೀರಾ, ಇಲ್ಲ ತಿರಸ್ಕಾರ ಮಾಡ್ತೀರಾ ಅಂತ ಕೇಳಿತ್ತು. ಆದ್ರೆ ರಮೇಶ್ ಕುಮಾರ್ ಎರಡನ್ನು ಬಿಟ್ಟು ಸಿದ್ದರಾಮಯ್ಯನವರ ಮಾತು ಕೇಳಿ ಶಾಸಕರನ್ನು ಅನರ್ಹರನ್ನಾಗಿ ಮಾಡಿದರು. ಹಿಂದೆ ಗುಲ್ಬರ್ಗಾದ ಶಾಸಕರು ರಾಜೀನಾಮೆ ನೀಡಿದಾಗ ಅಂಗೀಕಾರ ಮಾಡಿ, ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಿ, ಈಗ 17 ಜನರ ರಾಜೀನಾಮೆ ಅಂಗೀಕಾರ ಮಾಡದೆ ಇರುವುದು ಎಷ್ಟು ಸರಿ? ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯನಾ ಎಂದು ಪ್ರಶ್ನೆ ಮಾಡಿದ ಈಶ್ವರಪ್ಪ, ಅ. 22 ರಂದು ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರಿಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಸಿದ್ದರಾಮಯ್ಯರ ಕುತಂತ್ರದಿಂದಾಗಿಯೇ ಕಾಂಗ್ರೆಸ್ ಸೋತಿದೆ:
ಸಿದ್ದರಾಮಯ್ಯ ಕೆಳಗೆ ಬಿದ್ದಿದ್ದಾರೆ ಅಂತ ಕಲ್ಲು ಹೊಡೆಯಲು ನಾನು ಇಷ್ಟ ಪಡುವುದಿಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರದಲ್ಲಿದ್ದಾಗ ಅವರು ಮಾಡಿರುವ ಕೆಲಸ, ಜನರೊಂದಿಗಿನ ಸಂಪರ್ಕ ಅತಿಮುಖ್ಯವಾಗುತ್ತದೆ. ನಾನೇ ಮುಖ್ಯಮಂತ್ರಿ ಎಂದು ಸರ್ವಾಧಿಕಾರಿ ಧೋರಣೆ ಮಾಡಿಕೊಂಡು ನಾನು ಏನು ಬೇಕಾದರೂ ಮಾಡಬಹುದು ಎಂಬ ಸಿದ್ದರಾಮಯ್ಯರ ಧೋರಣೆ ಸರಿಯಲ್ಲ. ಅವರ ಕುತಂತ್ರದಿಂದಾಗಿಯೇ ಕಾಂಗ್ರೆಸ್ ಸೋತಿದೆ. ಇಂದು ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಅವರ ಕುತಂತ್ರದಿಂದ ಅವರೂ ಸೋತರು, ಸರ್ಕಾರನೂ ಬಿದ್ದುಹೋಯಿತು. ಇದು ಎಲ್ಲಾ ಪಕ್ಷದವರಿಗೆ ಪಾಠವಾಗಬೇಕಿದೆ ಎಂದು ಈಶ್ವರಪ್ಪ ಗುಡುಗಿದರು.
ಇದೇ ವೇಳೆ ಶರಾವತಿ ಕಣಿವೆಯಲ್ಲಿ ಭೂಗರ್ಭ ವಿದ್ಯುತ್ ಯೋಜನೆ ಡಿಪಿಆರ್ ವಿಚಾರವಾಗಿ ಮಾತನಾಡಿದ ಸಚಿವರು, ಕಾಡು ನಾಶವಾಗುತ್ತದೆ ಎಂದು ವಿದ್ಯುತ್ ಉತ್ಪಾದನೆ ನಿಲ್ಲಿಸಲು ಆಗಲ್ಲ. ಹಾಗಂತ ಕಾಡು ನಾಶ ಮಾಡಿ, ವಿದ್ಯುತ್ ಉತ್ಪಾದನೆ ಮಾಡುವುದೂ ಸರಿಯಲ್ಲ. ಕಾಡು ಉಳಿಯಬೇಕು, ವಿದ್ಯುತ್ ಕೂಡ ಉತ್ಪಾದನೆಯಾಗಬೇಕು. ಈ ಕುರಿತಂತೆ ತಜ್ಞರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಅಂತಿಮವಾಗಿ ಕ್ಯಾಬಿನೆಟ್ ಮುಂದೆ ವಿಚಾರ ಬಂದಾಗ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಬಳ್ಳಾರಿ ವಿಭಜನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆನಂದ್ ಸಿಂಗ್ ನೇತೃತ್ವದಲ್ಲಿ ವಿಜಯನಗರ ಜಿಲ್ಲೆ ಬೇರೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಈ ವಿಚಾರ ಸಿ.ಎಂ. ಮುಂದೆ ಬಂದಾಗ, ಈ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೆವೆ ಎಂದರು.