ಶಿವಮೊಗ್ಗ: ಸಿಗಂದೂರು ದೇವಾಲಯ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವೆ ಗಲಾಟೆ ನಡೆದ ಹಿನ್ನೆಲೆ ಇಂದು ಡಿಸಿ ಕೆ. ಬಿ. ಶಿವಕುಮಾರ್ ಹಾಗೂ ಎಸ್ಪಿ ಕೆ.ಎಂ.ಶಾಂತರಾಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕರ ನಡುವೆ ಇದ್ದ ಶೀತಲ ಸಮರ ಸ್ಫೋಟಗೊಂಡಿದೆ. ದೇವಾಲಯದ ಆಡಳಿತ ಕೈಗೆತ್ತಿಕೊಳ್ಳಲು ಅರ್ಚಕರ ಕುಟುಂಬ ಹಾಗೂ ಟ್ರಸ್ಟಿ ರಾಮಪ್ಪ ಅವರ ಕುಟುಂಬ ನಡುವಿನ ವಿವಾದ ಮೊನ್ನೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ನಿನ್ನೆ ಪೂಜೆ ನಡೆಸುವ ಶೇಷಗಿರಿ ಭಟ್ಟ ಅವರ ಸಹೋದರ ದ್ಯಾವಪ್ಪ ಎಂಬುವರ ಮೇಲೆ ಹಲ್ಲೆ ಸಹ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಡಿಸಿ ಹಾಗೂ ಎಸ್ಪಿ ಭೇಟಿ ನೀಡಿದ್ದರು.
ಭೇಟಿಯ ವೇಳೆ ದೇವಾಲಯ ನಿರ್ಮಾಣಕ್ಕೆ ಭೂಕಬಳಿಕೆ, ಹಣಕಾಸಿನ ವಹಿವಾಟು ಸೇರಿದಂತೆ ಎಲ್ಲ ರೀತಿಯ ಮಾಹಿತಿ ಪಡೆದು ಕೊಂಡಿದ್ದಾರೆ. ಸಿಗಂದೂರು ಚೌಡೇಶ್ವರಿ ದೇವಾಲಯದ ಕುರಿತು ತಮ್ಮ ಭೇಟಿಯ ವೇಳೆ ಪ್ರಥಮ ಮಾಹಿತಿ ಸಂಗ್ರಹ ಮಾಡಲಾಗಿದೆ.
ಪ್ರಕರಣದ ಸಂಪೂರ್ಣ ಮಾಹಿತಿ ನೀಡಲು ಸಾಗರ ಉಪವಿಭಾಗಾಧಿಕಾರಿ ನಾಗರಾಜ್ ಅವರಿಗೆ ಸೂಚನೆ ನೀಡಿದ್ದೇನೆ. ವರದಿ ಪರಿಶೀಲಿಸಿ, ನಂತರ ಸರ್ಕಾರಕ್ಕೆ ಸಲ್ಲಿಸಲಾಗುವುದು. ನಿನ್ನೆ ನಡೆದ ಹಲ್ಲೆಯ ಕುರಿತು ಎಸ್ಪಿ ಅವರು ದೂರು ದಾಖಲಿಸಲು ಸೂಚಿಸಿದ್ದಾರೆ ಎಂದು ಡಿಸಿ ತಿಳಿಸಿದರು.