ಶಿವಮೊಗ್ಗ : ಮೀನು ಹಿಡಿಯಲು ಹಾಕಿದ್ದ ಗಾಳಕ್ಕೆ ಮೊಸಳೆ ಮರಿ ಬಿದ್ದಿದ್ದು, ಇದನ್ನು ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಶಿವಮೊಗ್ಗ ತಾಲೂಕಿನ ಪಿಳ್ಳಂಗಿರಿ ಗ್ರಾಮದ ರಶೀದ್ ಅವರು ಹಾಕಿದ್ದ ಬಲೆಯಲ್ಲಿ ಮೊಸಳೆ ಸಿಕ್ಕಿದೆ.
ಶ್ರೀ ಲಕ್ಷ್ಮಿ ರಂಗನಾಥಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತುಂಗಾ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದರು. ರಶೀದ್ ಅವರು ಮೀನಿಗಾಗಿ ತುಂಗಾ ನದಿಯಲ್ಲಿ ಹಾಕಿದ್ದ ಗಾಳ ಜಗ್ಗಿದಂತಾಗಿದೆ.
ಕೂಡಲೇ ಅವರು ಗಾಳವನ್ನು ಮೇಲಕ್ಕೆ ಎಳೆದಿದ್ದಾರೆ. ಗಾಳದಲ್ಲಿ ಮೀನಿನ ಬದಲು ಮೊಸಳೆ ಮರಿ ಬಿದ್ದಿತ್ತು. ಬಳಿಕ ನೆರೆಹೊರೆಯವರಿಗೆ ವಿಚಾರ ತಿಳಿಸಿದ್ದಾರೆ.
ತುಂಗಾ ನದಿಯಲ್ಲಿ ಮೊಸಳೆ ಸಂತಾನೋತ್ಪತ್ತಿ : ಇತ್ತೀಚೆಗೆ ತುಂಗಾ, ಭದ್ರಾ ನದಿಗಳ ಸಂಗಮ ಸ್ಥಳವಾದ ಕೂಡಲಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು. ಈಗ ಕೂಡಲಿ ಸಮೀಪದ ಪಿಳ್ಳಂಗಿರಿ ಬಳಿ ಮೊಸಳೆ ಮರಿ ಪ್ರತ್ಯಕ್ಷವಾಗಿದೆ.
ಇದು ಮೊಸಳೆ ಸಂತಾನೋತ್ಪತ್ತಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ತುಂಗಾ ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ: Congress Mekedatu padayatra: 4 ಕಿ.ಮೀ ನಡೆಯುಷ್ಟರಲ್ಲಿ ಸಿದ್ದರಾಮಯ್ಯಗೆ ಸುಸ್ತು, ಕಾರಿನಲ್ಲಿ ವಾಪಸ್
ಜನರು ತುಂಗಾ ನದಿ ಬಳಿಗೆ ಹೋಗಿ ಬರುತ್ತಾರೆ. ದನಕರುಗಳು ಕೂಡ ನೀರು ಕುಡಿಯಲು ಹೊಳೆ ಬಳಿಗೆ ಬರುತ್ತವೆ. ಮೊಸಳೆಗಳು ಇರುವುದು ಗೊತ್ತಾಗುತ್ತಿದ್ದಂತೆ ಜನರು ಎಚ್ಚೆತ್ತಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.