ಶಿವಮೊಗ್ಗ: ಕೊರೊನಾದಿಂದ ಮಾನಸಿಕ ಖಿನ್ನತೆಗೆ ಒಳಗಾದರೆ ಅಂತಹವರಿಗೆ ಆತ್ಮಸ್ಥೈರ್ಯ, ಧೈರ್ಯ, ಸಕಾರಾತ್ಮಕ ಭಾವನೆಗಳನ್ನು ತುಂಬುವುದೇ ಪರಿಹಾರ. ಸೋಂಕಿಗೆ ಒಳಗಾದವರು ತಮ್ಮಲ್ಲಿಯೇ ಧೈರ್ಯವನ್ನು ತೆಗೆದುಕೊಳ್ಳಬೇಕಿದೆ. ಸೋಂಕಿತರನ್ನು ಹೆದರಿಸದೆ, ಇದು ಒಂದು ಸಣ್ಣ ಕಾಯಿಲೆ ಎಂದು ತಿಳಿದು, ತಿಳಿಸಬೇಕಿದೆ.
ಭಯ ಪಡುವ ಅವಶ್ಯಕತೆ ಇಲ್ಲ: ಸೋಂಕಿತರು ಕ್ವಾರಂಟೈನ್ ಕುರಿತು ಭೀತಿಯಿಂದ ಹೊರಗುಳಿದರೆ ವೈರಸ್ ವಿರುದ್ದ ಅರ್ಧ ಗೆದ್ದಂತೆ. ಮನೆಯಲ್ಲೇ ಕ್ವಾರಂಟೈನ್ ಆದ ಸಮಯದಲ್ಲಿ ಬೆರೆಯದೆ, ಮುಖತಃ ಭೇಟಿಯಾಗದಿರುವುದು ಮನಸ್ಸಿಗೆ ನೋವು ತರುತ್ತದೆ. ಆದರೆ, ಅದು ಅನಿವಾರ್ಯ. ಒಬ್ಬಂಟಿಯಾಗಿ ಕೊಠಡಿಯಲ್ಲಿ ಕಾಲ ಕಳೆಯುವುದು ಕಷ್ಟಕರ. ಕುಟುಂಬ ಸದಸ್ಯರನ್ನು ದೂರದಿಂದಲೇ ಮಾತನಾಡಬೇಕು. ಗೆಳೆಯರ ಜೊತೆ ನಿರಂತರ ಸಂಪರ್ಕದಲ್ಲಿ ಇರಬೇಕು. ವೈದ್ಯರು ಸೂಚಿಸಿದಂತೆ ಸಮಯಕ್ಕೆ ಸರಿಯಾಗಿ ಮಾತ್ರೆ ತೆಗೆದುಕೊಳ್ಳಬೇಕು ಎನ್ನುತ್ತಾರೆ ತಜ್ಞರು.
ರೋಗವನ್ನು ಎರಡು ರೀತಿ ವಿಂಗಡಣೆ
- ಕೊರೊನಾದಿಂದ ಶೀತ, ಜ್ವರ, ಕೆಮ್ಮು, ಸುಸ್ತು
- ರೋಗದ ಲಕ್ಷಣಗಳು ಇಲ್ಲದಿದ್ದರೂ ಸೋಂಕು ಪತ್ತೆ
ಮೊದಲನೇ ಲಕ್ಷಣಗಳಿದ್ದರೆ ಅವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯ. ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು. ಎರಡನೇ ಲಕ್ಷಣ ಇರುವವರಿಗೆ ವೈದ್ಯಕೀಯ ಸೇವೆಯ ಅವಶ್ಯಕತೆ ಇರುವುದಿಲ್ಲ. ಆದರೂ, ಇತರರಿಗೆ ರೋಗ ಹರಡಿಸುವ ಸಾಧ್ಯತೆ ಇರುವ ಕಾರಣ ವೈದ್ಯರ ಸಲಹೆಯನ್ನು ಪಡೆದು, ಮನೆಯಲ್ಲಿ ಅಥವಾ ಸರ್ಕಾರ ಸೂಚಿಸಿದೆಡೆ ಕ್ವಾರಂಟೈನ್ ಆಗಬೇಕು.
ಸೋಂಕಿತರು ತಮ್ಮ ಕುಟುಂಬ, ಸ್ನೇಹಿತರು, ಸಂಬಂಧಿಕರಿಂದ ದೂರ ಇರುವುದು ಅನಿವಾರ್ಯ. ಅಂತಹ ಸಂದರ್ಭದಲ್ಲಿ ಸೋಂಕಿತರು ತಮ್ಮನ್ನು ತಾವೇ ಗಟ್ಟಿಗೊಳಿಸಿಕೊಳ್ಳಬೇಕಿದೆ. ಖಿನ್ನತೆಯಿಂದ ಹೊರಬರಬೇಕಿದೆ. ಮನೆಯಲ್ಲೆ ಆಗಲಿ, ಆಸ್ಪತ್ರೆಯಲ್ಲೂ, ಕ್ವಾರಂಟೈನ್ ಕೇಂದ್ರಗಳಲ್ಲಿದ್ದರೆ ಸೋಂಕಿನ ಕುರಿತು ಚಿಂತೆ ಬಿಟ್ಟು, ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕಿದೆ.
ಮುಂಜಾನೆ ಎದ್ದ ತಕ್ಷಣ ಸಣ್ಣಪುಟ್ಟ ವ್ಯಾಯಾಮ ಮಾಡಬೇಕು. ಟಿವಿ ನೋಡುವುದು, ಪುಸ್ತಕ ಓದಬೇಕು. ಮೊಬೈಲ್ನಲ್ಲಿ ಮನೋರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸಿ ಆನಂದಿಸಬೇಕು. ಇನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗುವವರು ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು. ಮೊಬೈಲ್, ಕನ್ನಡಕ, ವಾಚ್ ಸೇರಿದಂತೆ ಓದುವ ಪುಸ್ತಕಗಳನ್ನು ತೆಗೆದುಕೊಂಡು ಹೋಗಬೇಕು. ಎಲ್ಲರಿಗೂ ಗೊತ್ತಿದೆ ಕ್ವಾರಂಟೈನ್ಗೆ ಒಳಗಾದರೆ, ಮುಖಾಮುಖಿ ಭೇಟಿ ಇರುವುದಿಲ್ಲ ಎಂಬುದು. ಹೀಗಾಗಿ, ಮೊದಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿರಬೇಕು.