ಶಿವಮೊಗ್ಗ: ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕ ವಿಶ್ವವಿದ್ಯಾನಿಲಯದ 6ನೇ ಸುಗ್ಗಿ ಘಟಿಕೋತ್ಸವ ಇಂದು ಶಿವಮೊಗ್ಗದ ನವಲೆಯ ಕೃಷಿ ವಿವಿ ಆವರಣದಲ್ಲಿ ನಡೆಯಿತು.
ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಭಾಗಿಯಾಗಿದ್ದರು. ರಾಜ್ಯಪಾಲರನ್ನು ವಿ.ವಿಯ ಕುಲಪತಿ ಎಂ.ಕೆ. ನಾಯಕ್ ಅವರು ಸ್ವಾಗತಿಸಿ, ವೇದಿಕೆಗೆ ಕರೆ ತಂದರು. ನಂತರ ರಾಜ್ಯಪಾಲರ ಅನುಮತಿ ಮೇರೆಗೆ ಘಟಿಕೋತ್ಸವ ಪ್ರಾರಂಭಿಸಲಾಯಿತು.
ಈ ವೇಳೆ, ಸ್ನಾತ್ತಕೋತ್ತರ ಹಾಗೂ ಪದವಿ ತರಗತಿಗಳು ಸೇರಿ 28 ವಿದ್ಯಾರ್ಥಿಗಳಿಗೆ 35 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಇದಕ್ಕೂ ಮೊದಲು 15 ವಿದ್ಯಾರ್ಥಿಗಳಿಗೆ ಪಿಹೆಚ್ಡಿ ಪ್ರದಾನ ಮಾಡಲಾಯಿತು. ಭಾರತ್ ಬಯೋಟೇಕ್ ಇಂಟರ್ ನ್ಯಾಶನಲ್ ಲಿಮಿಟೆಡ್ ಸಂಸ್ಥಾಪಕ ಡಾ.ಕೃಷ್ಣಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.
ಮುಖ್ಯಾಂಶಗಳು:
- ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಾಲೇನಹಳ್ಳಿಯ ಕೂಲಿ ಕಾರ್ಮಿಕರ ಮಗನಾದ ಅಂಬರೀಷ್ ಅವರು ಕೃಷಿ ಕೀಟಶಾಸ್ತ್ರ ವಿಷಯದಲ್ಲಿ 2 ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಸದ್ಯ ಇವರು ಕೃಷಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿ ಕೀಟಶಾಸ್ತ್ರದಲ್ಲಿ ಇನ್ನಷ್ಟು ಸಂಶೋಧನೆ ಮಾಡಿ ದೇಶ ಸೇವೆ ಮಾಡುವ ಆಸೆ ಹೊಂದಿದ್ದೇನೆ ಎಂದು ತಿಳಿಸಿದರು.
- ಬಿಎಸ್ಸಿ ಕೃಷಿ ವಿಭಾಗದಲ್ಲಿ ಅಕ್ಷತ ಒಟ್ಟು 4 ಚಿನ್ನದ ಪದಕ ಪಡೆದರು. ಅಕ್ಷತಾ ಅವರು ಸಹ ಕೃಷಿ ಕುಟುಂಬದಿಂದ ಬಂದವರಾಗಿದ್ದು, ಮುಂದೆ ಐಎಎಸ್ ಮಾಡುವ ಗುರಿ ಹೊಂದಿದ್ದಾರೆ.
- ಸ್ಫೂರ್ತಿ ತೋಟಗಾರಿಕಾ ವಿಭಾಗದಲ್ಲಿ ಒಟ್ಟು 4 ಚಿನ್ನದ ಪದಕ ಗಳಿಸಿದ್ದಾರೆ.
- ಅರಣ್ಯ ವಿಭಾಗದಲ್ಲಿ ಕ್ಷಮಾ ಕೋರ್ಪಡೆ 2 ಚಿನ್ನದ ಪದಕ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಹಂಪಿ ವಿಶ್ವ ವಿದ್ಯಾಲಯದ ಹಗರಣಗಳ ತನಿಖೆಯಾಗಲಿ: ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ