ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ತೀ.ನಾ. ಶ್ರೀನಿವಾಸ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಈಗ ಅಧಿಕಾರಿಯನ್ನು ನೇಮಕ ಮಾಡಿದೆ. ಆದರೆ, ಸರ್ಕಾರದ ಅರಣ್ಯ ಇಲಾಖೆ ಮುಖ್ಯಕಾರ್ಯದರ್ಶಿಯು ಶರಾವತಿ ಮುಳುಗಡೆ ಸಂತ್ರಸ್ತರಿಗೆ ವಿರುದ್ಧವಾಗಿ ಆದೇಶ ನೀಡುವ ಮೂಲಕ ಸಂತ್ರಸ್ತರ ಹಕ್ಕು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಶರಾವತಿ ಸಂತ್ರಸ್ತರಿಗೆ ಜಮೀನು ಮಂಜೂರು ಮಾಡಬೇಕಾದರೆ ಸುಪ್ರೀಂಕೋರ್ಟ್‌ನ ಅನುಮತಿ ಪಡೆದುಕೊಳ್ಳಬೇಕು ಎಂದು ಅರಣ್ಯ ಇಲಾಖೆ ಕಾರ್ಯದರ್ಶಿ ಆದೇಶ ನೀಡಿದ್ದಾರೆ. ಹೀಗಾದರೆ, ಮುಳುಗಡೆ ಸಂತ್ರಸ್ತರಿಗೆ ಜಮೀನು ನೀಡಲು ಸಾಧ್ಯವೇ ಇಲ್ಲ. ನಾನು ಬಗರ್‌ಹುಕುಂ ಚಾಂಪಿಯನ್ ಅಂತ ಘೋಷಿಸಿಕೊಂಡಿರುವ ಮುಖ್ಯಮಂತ್ರಿಗಳು ಯಾಕೆ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅರಣ್ಯಹಕ್ಕು ಕಾಯ್ದೆಯಡಿ ಬಡ ರೈತರಿಗೆ ಹಕ್ಕುಪತ್ರ ಕೊಡುವುದಾಗಿ ಹೇಳಿ ಪಾದಯಾತ್ರೆ ಮಾಡಿಬಂದ ಇವರು, ಇಂದು 75 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡದೇ ಕುಳಿತಿದ್ದಾರೆ. ಅರಣ್ಯವಾಸಿಗಳ ಸಮಸ್ಯೆ ಬಗೆಹರಿಯಲಿಲ್ಲ. ಶರಾವತಿ ಸಂತ್ರಸ್ತರು 10 ಸಾವಿರ ಜನ ಇದ್ದರೂ 1 ಸಾವಿರ ಜನಕ್ಕೆ ಮಾತ್ರ ಮರುವಸತಿ ಕಲ್ಪಿಸಲಾಗಿದೆ. ಇನ್ನು 9 ಸಾವಿರ ಜನರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ. ಯಡಿಯೂರಪ್ಪನವರು ಪಾಪಕ್ಕೆ ಗುರಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದರು.
ಸ್ವಾಮಿನಾಥನ್ ವರದಿ ಏಕೆ ಜಾರಿ ಮಾಡಿಲ್ಲ : ಸ್ವಾಮಿನಾಥನ್ ವರದಿ ಜಾರಿಗೆ ತರುವಲ್ಲಿ ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದ ಅವರು, ಯಡಿಯೂರಪ್ಪ ಸ್ವಾಮಿನಾಥನ್ ವರದಿ ಏಕೆ ಜಾರಿ ಮಾಡಿಲ್ಲ ಎಂದು ಹೇಳಬೇಕು ಎಂದು ಒತ್ತಾಯಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ತಮ್ಮ ಮನಸ್ಸಿಗೆ ಬಂದಂತೆ ರೈತ ವಿರೋಧಿ ಕಾಯ್ದೆಗಳನ್ನು ರೂಪಿಸುತ್ತಾ, ಬಂಡವಾಳಗಾರರಿಗೆ ಮಣೆ ಹಾಕುತ್ತಾ ರಾಜ್ಯಭಾರ ಮಾಡುತ್ತಿದೆ. ಸರ್ಕಾರ ಶ್ರೀಮಂತರ ಏಜೆಂಟಾಗಿ ಕೆಲಸ ಮಾಡುತ್ತಿದೆ ಎಂದರು.