ಶಿವಮೊಗ್ಗ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ನಾನು ಹೇಳೋಕೆ ಇಷ್ಟಪಡೋದೇನೆಂದ್ರೆ, ತಾವು ಏನು ಆತಂಕಕ್ಕೆ ಒಳಗಾಗೋದು ಬೇಡ. ಕಾನೂನು ಬದ್ಧವಾಗಿಯೇ ಎಲ್ಲಾ ತನಿಖೆ ಆಗುತ್ತದೆ ಎಂದು ಹುಬ್ಬಳ್ಳಿ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗಾರೊಂದಿಗೆ ಹುಬ್ಬಳ್ಳಿ ಗಲಭೆ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ಹುಬ್ಬಳ್ಳಿ ಪ್ರಕರಣದ ತನಿಖೆ ಕಾನೂನುಬದ್ಧವಾಗಿ, ಸಾಕ್ಷಿ ಆಧಾರದ ಮೇಲೆ ನಡೆಯುತ್ತಿದೆ. ಈ ವಿಷಯದಲ್ಲಿ ಕಾಂಗ್ರೆಸ್ನವರು ಏಕೆ ಆತಂಕಗೊಂಡಿದ್ದಾರೋ ಗೊತ್ತಿಲ್ಲ. ಸತ್ಯ ಎಲ್ಲವೂ ಹೊರಗೆ ಬರುತ್ತದೆ. ಡಿ.ಜೆ. ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ನಡೆದ ಘಟನೆಯೇ ಈಗ ಹುಬ್ಬಳ್ಳಿಯಲ್ಲಿ ಆಗಿದೆ ಎಂದರು.
ಓದಿ: ಹುಬ್ಬಳ್ಳಿ ಪ್ರಕರಣದಲ್ಲಿ ವಿಡಿಯೋ, ಸಾಕ್ಷಿಗಳ ಆಧಾರದಲ್ಲಿ ತನಿಖೆ ನಡೆಯುತ್ತಿದೆ : ಸಿಎಂ ಬೊಮ್ಮಾಯಿ
ಗಲಭೆಗೆ ಕಾರಣವಾಗಿರುವ ಆರೋಪಿಗಳ ವಿರುದ್ಧ ಮುಲಾಜ್ ಇಲ್ಲದೇ ಕ್ರಮ ಕೈಗೊಳ್ಳುತ್ತೇವೆ. ಇಂತಹ ಸಂದರ್ಭದಲ್ಲಿ ಅವರಿಂದ ಈ ಹೇಳಿಕೆ ನಿರೀಕ್ಷೆ ಮಾಡ್ತೀನಿ. ಈ ರೀತಿ ತನಿಖೆ ಮಾಡುವ ಸಂದರ್ಭದಲ್ಲಿ ಬೇರೆ-ಬೇರೆ ರೀತಿ ಹೇಳಿಕೆ ನೀಡಿ ತನಿಖಾಧಿಕಾರಿಗಳಿಗೆ ಪ್ರಭಾವ ಬೀರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ದಿಂಗಾಲೇಶ್ವರ ಶ್ರೀಗಳ ಆರೋಪ ವಿಚಾರವಾಗಿ ಮಾತನಾಡಿದ ಸಿಎಂ, ಅವರ ಬಳಿ ಏನು ಸಾಕ್ಷಿ ಇದೆಯೋ ಅದನ್ನು ಕೊಡಲಿ. ಎಲ್ಲಾ ವಿವರ ಕೊಡಲಿ ತನಿಖೆ ಮಾಡಿಸುತ್ತೇವೆ. ಡಿಕೆಶಿ ಆರೋಪಕ್ಕೆ ಯಾವುದಾದರೂ ಆಧಾರ ನೀಡಿದಲ್ಲಿ ಖಂಡಿತ ತನಿಖೆ ಮಾಡಿಸುತ್ತೇನೆ. ಅವರ ಕಾಲದಲ್ಲಿ ಸಾಕಷ್ಟು ಆರೋಪ ಬಂದಿತ್ತು. ಆಧಾರ ಇದ್ದರೆ ಅಷ್ಟೇ ಮಾತನಾಡಬೇಕು. ಆಧಾರ ಇಲ್ಲದಿದ್ದರೆ ಮಾತನಾಡಬಾರದು. ಮಠಗಳಿಗೆ ಕೆಲಸ ಕೊಡ್ತೀವಿ, ಡಿಸಿ ಅವರು ಹಣ ಬಿಡುಗಡೆ ಮಾಡ್ತಾರೆ. ಕಾಂಗ್ರೆಸ್ನವರು ಬಹಳ ಹತಾಶರಾಗಿ ಇಂತಹ ಹೇಳಿಕೆ ಕೊಡ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಓದಿ: ದೇಶವಿಭಜನೆ ಮಾಡುವವರಿಗೆ ಪುಷ್ಟಿ ನೀಡುವ ಕೆಲಸ ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ: ಸಿಎಂ
ಸಚಿವ ಸಂಪುಟ ಪುನಾರಚನೆ ವಿಚಾರ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕೇಂದ್ರದ ವರಿಷ್ಠರು ಅದರ ಬಗ್ಗೆ ಚಿಂತನೆ ಮಾಡಿ ಯಾವಾಗ ಹೇಳ್ತಾರೋ ಆಗ ಮಾಡ್ತೇವೆ. ಸರಿಯಾದ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.