ಶಿವಮೊಗ್ಗ: ಮಾಲೀಕನ ನಂಬಿಕೆಗೆ ಮೋಸ ಮಾಡಿ ಹಣ ಎಗರಿಸಿದ್ದ ಕಾರು ಚಾಲಕ ಸೇರಿ ಇಬ್ಬರನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರೇಕಂದವಾಡಿ ಗ್ರಾಮದ ಅಡಕೆ ವ್ಯಾಪಾರಿಯೊಬ್ಬರು ಭದ್ರಾವತಿ ತಾಲೂಕು ಹೊಸಕೊಪ್ಪ ಗ್ರಾಮದ ಗೋಪಾಲಯ್ಯ ಎಂಬುವವರ ಬಳಿ ಅಡಕೆ ಖರೀದಿ ಮಾಡಲೆಂದು ತನ್ನ ಚಾಲಕ ಅನಿಲ್ ಎಂಬಾತನಿಗೆ 18 ಲಕ್ಷ ರೂ. ನೀಡಿ ಕಳುಹಿಸಿರುತ್ತಾರೆ. ಚಾಲಕ ಅನಿಲ್ ಬೊಲೆರೂ ವಾಹನದಲ್ಲಿ ತನ್ನ ಜೊತೆ ಮೂರು ಜನ ಕೆಲಸಗಾರರನ್ನು ಕರೆದುಕೊಂಡು ಹೊಸಕೊಪ್ಪ ಗ್ರಾಮಕ್ಕೆ ಬಂದಿರುತ್ತಾನೆ.
ಹೊಸಕೊಪ್ಪಕ್ಕೆ ಬಂದ ಅನಿಲ್ ತನ್ನ ವಾಹನವನ್ನು ನಿಲ್ಲಿಸಿ ಮೂರು ಜನ ಕೆಲಸಗಾರರ ಜೊತೆ ಊಟಕ್ಕೆ ಹೋಗಿದ್ದಾನೆ. ಊಟ ಮುಗಿಸಿ ವಾಪಸ್ ಬರುವಷ್ಟರಲ್ಲಿ ವಾಹನದಲ್ಲಿದ್ದ ಹಣ ಕಾಣೆಯಾಗಿರುತ್ತದೆ. ಅಲ್ಲಲ್ಲಿ ಹುಡುಕಾಟ ನಡೆಸಿದ ನಂತರ ಚಾಲಕ ಅನಿಲ್ ಮಾಲೀಕನಿಗೆ ಮಾಹಿತಿ ನೀಡುತ್ತಾನೆ. ಅವರು ಬಂದು ಹುಡುಕಾಟ ನಡೆಸಿದ್ದು, ಹಣ ಸಿಗದ ಕಾರಣ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಳ್ಳುತ್ತಾರೆ. ಅಡಕೆ ವ್ಯಾಪಾರಿ ಸೇರಿದಂತೆ ಚಾಲಕ ಅನಿಲ್ ಮತ್ತು ಮೂರು ಜನ ಕೆಲಸಗಾರರು ಹಾಗೂ ಗೋಪಾಲಯ್ಯರನ್ನು ಸಹ ವಿಚಾರಣೆಗೆ ಒಳಪಡಿಸುತ್ತಾರೆ. ಈ ವೇಳೆ ಅಡಕೆ ವ್ಯಾಪಾರಿ ತನ್ನ ಕಾರು ಚಾಲಕ ಹಾಗೂ ಮೂವರು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸುವುದಿಲ್ಲ, ಅವರು ಒಳ್ಳೆಯವರು ಎಂದೇ ಹೇಳಿರುತ್ತಾನೆ. ಆದರೆ, ಪೊಲೀಸ್ ವಿಚಾರಣೆ ವೇಳೆ ಚಾಲಕ ಅನಿಲ್ ಮಾಲೀಕನ ನಂಬಿಕೆಗೆ ಮೋಸ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ.
ಇದನ್ನೂ ಓದಿ: ಅಕ್ಕಪಕ್ಕದ ಮನೆ ಮಹಿಳೆಯರ ಫೋಟೋ, ವಿಡಿಯೋ ಚಿತ್ರೀಕರಿಸುತ್ತಿದ್ದ 60ರ ವೃದ್ಧ ಪೊಲೀಸರ ಬಲೆಗೆ
ಹಿರೇಕಂದವಾಡಿ ಗ್ರಾಮದ ಪಂಚರ್ ಅಂಗಡಿ ನಡೆಸುವ ನಾಗರಾಜ್ ಎಂಬಾತನ ಜೊತೆ ಸೇರಿ ಕಾರು ಚಾಲಕ ಅನಿಲ್ ಹಣ ಕಳೆದು ಹೋದ ನಾಟಕವಾಡಿದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಅನಿಲ್ ಮತ್ತು ಪಂಚರ್ ಅಂಗಡಿಯ ನಾಗರಾಜ್ ಇರಿಬ್ಬರು ಸೇರಿ ಹಣ ಕದಿಯುವ ಬಗ್ಗೆ ಪ್ಲಾನ್ ಮಾಡಿದ್ದರು. ಅದರಂತೆ ಅನಿಲ್ ವಾಹನವನ್ನು ನಾಗರಾಜ್ ಹಿರೇಕಂದವಾಡಿಯಿಂದ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದು ವಾಹನದಲ್ಲಿದ್ದ ಹಣವನ್ನು ಎಗಿರಿಸಿದ್ದನು. ಈ ವಿಚಾರವನ್ನು ವಿಚಾರಣೆ ವೇಳೆ ಅನಿಲ್ ಬಾಯಿ ಬಿಟ್ಟಿದ್ದಾನೆ.
ತನಿಖಾ ತಂಡದಲ್ಲಿ ಹೊಳೆಹೊನ್ನೂರು ಪಿಐ ಲಕ್ಷ್ಮೀ ಪತಿ, ಪಿಎಸ್ಐ ಕೃಷ್ಣ ಕುಮಾರ್, ಸಿಬ್ಬಂದಿ ಲಿಂಗೇಗೌಡ, ಮಂಜುನಾಥ್, ಪ್ರಕಾಶ ನಾಯ್ಕ, ವಿಶ್ವನಾಥ್, ರಾಜೇಸಾಬ್ ಇದ್ದರು. ಬಂಧಿತ ಅನಿಲ್ ಹಾಗೂ ನಾಗರಾಜ್ರಿಂದ 17 ಲಕ್ಷದ 95 ಸಾವಿರ ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.