ಶಿವಮೊಗ್ಗ: ನಾಡ ಹಬ್ಬದ ದಸರಾ ಆಚರಣೆಗೆಂದು ಕರೆದ ಸಭೆಯಲ್ಲಿ ನೆರೆ ಪರಿಹಾರ ಸರಿಯಾಗಿ ವಿತರಣೆ ಆಗಿಲ್ಲ ಎಂದು ಆಡಳಿತ ಪಕ್ಷದ ಮೇಲೆ ವಿಪಕ್ಷಗಳು ಮುಗಿಬಿದ್ದ ಘಟನೆ ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ನಡೆಯಿತು.
ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ಸೌಧದಲ್ಲಿ ಮಹಾನಗರ ಪಾಲಿಕೆ ಸದಸ್ಯರಿಗೆ ದಸರಾ ಆಚರಣೆಯ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆ ನಿಗದಿತ ಸಮಯಕ್ಕೆ ಪ್ರಾರಂಭವಾಯ್ತು. ಸಭೆಯ ಪ್ರಾರಂಭದಲ್ಲಿ ಕಾಂಗ್ರೆಸ್ ಸದಸ್ಯ ಯೋಗೇಶ್ ಅವರು ನೆರೆ ಪರಿಹಾರ ವಿತರಣೆಯಲ್ಲಿ ಪಾಲಿಕೆ ಎಡವಿದೆ. ಪರಿಹಾರ ಸರಿಯಾಗಿ ನೀಡಿಲ್ಲ ಎಂದು ಆರೋಪಿಸಿದರು. ಇದರಿಂದ ಬಿಜೆಪಿ ಸದಸ್ಯರು ಕೆರಳಿ, ಎಲ್ಲಾ ಕಡೆ ಸರಿಯಾಗಿಯೇ ಸರ್ವೆಯಾಗಿದೆ. ಇನ್ನೂ ಕೆಲವು ಕಡೆ ಪರಿಹಾರ ವಿತರಣೆಯಲ್ಲಿ ಪ್ರಗತಿ ಇದೆ. ಆದಷ್ಟು ವೇಗವಾಗಿ ಪರಿಹಾರ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ರು.
ವಿರೋಧ ಪಕ್ಷದವರು ಕೇಳುತ್ತಿದ್ದ ಪ್ರಶ್ನೆಗೆ ಉಪ ಮೇಯರ್ ಚನ್ನಬಸಪ್ಪ ಉತ್ತರ ನೀಡುತ್ತಿದ್ದರು. ಇದಕ್ಕೆ ವಿರೋಧ ಪಕ್ಷದವರು, ಎಲ್ಲಾದಕ್ಕೂ ಉಪ ಮೇಯರ್ ಉತ್ತರ ನಿಡೋದಾದ್ರೆ ನೀವು ಯಾಕೆ ಇರಬೇಕು ಎಂದು ಉಳಿದವರಿಗೆ ಪ್ರಶ್ನಿಸಿದ್ರು. ಸಚಿವ ಕೆ.ಎಸ್.ಈಶ್ವರಪ್ಪನವರ ವಾರ್ಡ್ನಲ್ಲಿ ಇನ್ನೂರಕ್ಕೂ ಹೆಚ್ಚು ಜನ ನಿರಾಶ್ರಿತರಿದ್ದಾರೆ. ಆದ್ರೆ, ಇದುವರೆಗೂ ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಪರಿಹಾರ ಲಭ್ಯವಾಗಿದೆ ಎಂದು ಕಾಂಗ್ರೆಸ್-ಜೆಡಿಎಸ್ ಸದಸ್ಯರು ಸಭೆಯ ಬಾವಿಗಿಳಿದು ತೀವ್ರ ಮಾತಿನ ಚಕಮಕಿ ನಡೆಸಿದರು. ನಂತರ ಉಪ ಮೇಯರ್ ಎಲ್ಲರ ಸಮಸ್ಯೆಯನ್ನು ಪರಿಹರಿಸಿ ಕೊಡುವ ಭರವಸೆ ನೀಡಿ, ಎಲ್ಲರನ್ನು ಅವರವರ ಸ್ಥಾನಕ್ಕೆ ಕಳುಹಿಸಿದರು.
ಸಭೆಯಲ್ಲಿ ಬಾರದ ದಸರಾ ವಿಚಾರ
ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ದಸರಾ ಆಚರಣೆ ಹೇಗೆ ಮಾಡಬೇಕು ಎಂಬ ಚರ್ಚೆ ನಡೆಯದೇ ನೆರೆ ಪರಿಹಾರದ ವಿತರಣೆ ಆಗದೆ ಇರುವ ಬಗ್ಗೆ ಚರ್ಚೆ ನಡೆದ ಕಾರಣ ದಸರಾ ಆಚರಣೆ ಚರ್ಚೆಯನ್ನು ಮುಂದಕ್ಕೆ ಹಾಕಲಾಯಿತು. ಆಡಳಿತ ಪಕ್ಷದವರು, ವಿರೋಧ ಪಕ್ಷದವರ ಮೇಲೆ ಹಾಗೂ ವಿರೋಧ ಪಕ್ಷದವರು ಆಡಳಿತ ಪಕ್ಷಗಳ ಮೇಲೆ ಆರೋಪ ಪ್ರತ್ಯಾರೋಪ ಮಾಡುತ್ತಿದ್ದರು. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 960 ಮನೆಗಳು ಪೂರ್ಣವಾಗಿ ಬಿದ್ದಿವೆ. 516 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಒಟ್ಟು 1476 ಮನೆಗಳಿಗೆ ಹಾನಿಗೊಳಗಾಗಿವೆ. 1476ಲ್ಲಿ ಈಗ 869 ಮನೆಗಳಿಗೆ ಪರಿಹಾರ ವಿತರಣೆಯಾಗಿದೆ. ಸಭೆಯಲ್ಲಿ ಮೇಯರ್ ಲತಾ ಗಣೇಶ್ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.