ಶಿವಮೊಗ್ಗ: ಆಧುನಿಕತೆ ಬೆಳೆದಂತೆ ನಮಗೆ ಕೃಷಿಯೂ ಬೇಕು, ಕೈಗಾರಿಕೆಯೂ ಬೇಕು. ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋದ್ರೆ ನಮಗೆ ಪ್ರಗತಿ ಸಾಧ್ಯವಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನ್ಯಾಶನಲ್ ಸ್ಟಾಂಡರ್ಡ್ ಸರ್ವೆ ಆಫ್ ಇಂಡಿಯಾದ ಪ್ರಕಾರ ದೇಶದ ಶೇ. 48ರಷ್ಟು ಕೃಷಿಕ ಯುವಕರು, ಹಳ್ಳಿಗಳನ್ನು ಬಿಟ್ಟು ಪಟ್ಟಣ ಪ್ರದೇಶಗಳಿಗೆ ಹೋಗ್ತಾ ಇದ್ದಾರೆ. ಪಟ್ಟಣದಲ್ಲಿ ಕಾರ್ಖಾನೆಗಳು ಜಾಸ್ತಿ ಎಂದು ವಲಸೆ ಹೋಗುತ್ತಾರೆ. ನಾವು ಇರುವಂತಹ ಕೃಷಿ ಭೂಮಿಯಲ್ಲಿ ಎಷ್ಟು ಬಂಜರು ಭೂಮಿ ಇದೆ. ಎಲ್ಲಿ ಕೃಷಿಗೆ ಉಪಯುಕ್ತ ಭೂಮಿ ಇರುವುದಿಲ್ಲ. ಅಲ್ಲಿ ಕಾರ್ಖಾನೆಯ ಅವಶ್ಯಕತೆ ಇದೆ. ಮೂಲಭೂತ ಸೌಕರ್ಯ ಸಿಗುವಲ್ಲಿ ಕಾರ್ಖಾನೆ ಸ್ಥಾಪನೆ ಮಾಡಿದರೆ ಗ್ರಾಮದ ಯುವಕರು ಕಾರ್ಖಾನೆ ಕೆಲಸದ ಜೊತೆ ತಮ್ಮ ಕೃಷಿ ಭೂಮಿಗಳನ್ನು ನೋಡಿಕೊಳ್ಳಬಹುದಾಗಿದೆ. ಅನಿವಾರ್ಯವಾದಾಗ ಕಾರ್ಖಾನೆಗೆ ಭೂಮಿ ನೀಡಬೇಕಾಗುತ್ತದೆ ಎಂದರು.
ಕೃಷಿ ಕಾಲೇಜಿನಲ್ಲಿ ಸೀಟು ಪಡೆಯುವ ಕಾರಣಕ್ಕೆ ತಮ್ಮ ಆದಾಯವನ್ನೇ ಕಡಿಮೆ ತೋರಿಸಿ ಕೆಲವರು ವಂಚಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ರೀತಿ ನಡೆಯಬಾರದು. ಈ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಗುವುದು ಎಂದರು.
ಆಧುನಿಕ ತಂತ್ರಜ್ಞಾನಗಳ ಜೊತೆಗೆ ಹಲವು ಲ್ಯಾಬ್ಗಳನ್ನು ಸ್ಥಾಪಿಸಲಾಗಿದೆ. ಲ್ಯಾಬ್ನ ರಿಸರ್ಚ್ಗಳು ಲ್ಯಾಬ್ನಲ್ಲೇ ಉಳಿಯುವಂತಾಗಿದೆ. ಲ್ಯಾಬ್ ಟು ಲ್ಯಾಂಡ್ ಎಂಬ ಉದ್ದೇಶದಿಂದ ನಾವು ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಕಟ್ಟಕಡೆಯ ಕೃಷಿಕರಿಗೂ ಸಹ ಈ ಲ್ಯಾಬ್ ತಲುಪುವಂತೆ ಪ್ರಯತ್ನ ಮಾಡಲಾಗುತ್ತಿದೆ ಎಂದರು.