ಶಿವಮೊಗ್ಗ: ಸಾವರ್ಕರ್ ಕುರಿತು ಮಾತನಾಡುವ ಕಾಂಗ್ರೆಸ್ ನಾಯಕರು ದೇಶದ್ರೋಹಿಗಳು ಎಂದು ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.
ಜಿಲ್ಲಾ ಬಿಜೆಪಿ ವಿಶೇಷ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಾರ್ವಕರ್ ದೇಶಕ್ಕಾಗಿ ಪ್ರಾಣ ಕೊಟ್ಟರು. ಅಂತಹ ವೀರರ ವಿರುದ್ಧ ಮಾತನಾಡುವುದು ಸರಿಯಲ್ಲ. ಈ ಮೂಲಕ ಕಾಂಗ್ರೆಸ್ ದೇಶದಲ್ಲಿ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ ಎಂದು ಹರಿಹಾಯ್ದರು.
ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಿಂದ ಭಾರತದ ಮುಸಲ್ಮಾನರಿಗೆ ಅನ್ಯಾಯವಾಗುವುದಿಲ್ಲ. ಬದಲಾವಣೆ ಮತ್ತು ಪರಿವರ್ತನೆ ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಆದರೆ ಕಾಂಗ್ರೆಸ್ನಲ್ಲಿ ವಂಶಾವಳಿ ಆಡಳಿತ ಇದೆ ಎಂದು ಟೀಕಿಸಿದರು.
ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಿಶ್ರಮದಿಂದಾಗಿಯೇ ಬಿಜೆಪಿ ಗೆಲುವು ಸಾಧಿಸಿದೆ ಎಂದು ನಳಿನ್ ಕುಮಾರ್ ಕಟೀಲ್ ಬಣ್ಣಿಸಿದರು.
ಐದು ನಿಮಿಷದಲ್ಲಿ ಬಿಎಸ್ವೈ ಫೋಟೋ ಖಾಲಿ ಆಗುತ್ತೆ: ವ್ಯಂಗ್ಯ
ಸಂಸದನಾದ ಬಳಿಕ ದೆಹಲಿಯಲ್ಲಿ ನೀಡಲಾಗಿರುವ ಮನೆಯಲ್ಲಿ ಗೃಹಪ್ರವೇಶಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಫೋಟೋಗಳಿವೆ. ಯಡಿಯೂರಪ್ಪ ಅವರ ಹಳೆಯ ಫೋಟೋ ಇದೆ. ಆದರೆ, ಹೊಸದು ಬೇಕಾಗಿದೆ ಎಂದು ಆಯನೂರು ಮಂಜುನಾಥ್ ಅವರಿಗೆ ಹೇಳಿದ್ದೆ.
ಫೋಟೋ ಖರೀದಿಸಲು ಮಾರುಕಟ್ಟೆಯಲ್ಲಿ ದೆಹಲಿಯ ಫೋಟೋ ಮಳಿಗೆಯಲ್ಲಿ ಬಿಎಸ್ವೈ ಫೋಟೊ ಕೇಳಿದ್ದೆವು. ಹೀಗೆ 2-3 ಮಳಿಗೆಗಳಲ್ಲಿ ಕೇಳಿದರೂ ಸಿಗಲಿಲ್ಲ. ಮತ್ತೊಂದು ಅಂಗಡಿಯಲ್ಲಿ ಬಿಎಸ್ವೈ ಅವರ ಬದಲಿಗೆ ಸಿದ್ದರಾಮಯ್ಯ ಫೋಟೋ ಕೊಟ್ಟರು.
ನಾವು ಕೇಳಿದ್ದು ಯಾರದು, ನೀವು ಕೊಟ್ಟಿದ್ದು ಯಾರದು ಎಂದು ಪ್ರಶ್ನಿಸಿದಾಗ ಅಂಗಡಿಯವ ಬಿಎಸ್ವೈ ಫೋಟೋ ಇಲ್ಲ ಸ್ವಾಮಿ. ತಪ್ಪು ತಿಳಿದುಕೊಳ್ಳಬೇಡಿ. ಯಡಿಯೂರಪ್ಪ ಅವರ ಪೋಟೋಗಳು ಅಂಗಡಿಗೆ ಬಂದ ಐದು ನಿಮಿಷದಲ್ಲಿ ಖಾಲಿ ಆಗುತ್ತವೆ. ಆದ್ರೆ, ಸಿದ್ದರಾಮಯ್ಯ ಅವರ ಪೋಟೊಗಳು 10 ವರ್ಷದಿಂದ ಯಾರೂ ಕೇಳುತ್ತಿಲ್ಲ ಎಂದು ಅಂಗಡಿ ಮಾಲೀಕ ಹೇಳಿದರು ಎಂದು ಕಟೀಲ್ ವ್ಯಂಗ್ಯವಾಡಿದರು.