ಶಿವಮೊಗ್ಗ: ಭದ್ರಾ ಹಿನ್ನೀರಿನ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಭದ್ರಾ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡುತ್ತಿದೆ. ಹಾಲಿ ಭದ್ರಾ ಅಣೆಕಟ್ಟೆಯಿಂದ 34 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಭದ್ರಾವತಿ ಪಟ್ಟಣದ ಹೊಸ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ಮೂರು ಅಡಿ ನೀರು ಹರಿಯುತ್ತಿದೆ.
ಸೇತುವೆಯ ಎರಡು ಬದಿಯಲ್ಲಿ ಬ್ಯಾರಿಕೇಟ್ ಅಳವಡಿಸಿ ಪೊಲೀಸರಿಂದ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಭದ್ರಾವತಿಯ ಕವಲಗುಂದಿ, ಏನಾಕ್ಷಿ ಬಡಾವಣೆ, ಅಂಬೇಡ್ಕರ್ ಬಡಾವಣೆ ಹಾಗೂ ಗೂಂಡುರಾವ್ ಬಡಾವಣೆಗಳಿಗೆ ನೀರು ನುಗ್ಗಿದೆ. ಇದರಿಂದ ಇಲ್ಲಿನ ಎಲ್ಲ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಕರೆತರಲಾಗಿದೆ.
ಕವಲುಗುಂದಿ ಹಾಗೂ ಅಂಬೇಡ್ಕರ್ ಬಡಾವಣೆಯ ನಿವಾಸಿಗಳನ್ನು ಹುತ್ತಾ ಕಾಲೋನಿಯ ಒಕ್ಕಲಿಗರ ಸಮುದಾಯ ಭವನದಲ್ಲಿ ಆಶ್ರಯ ನೀಡಲಾಗಿದೆ. ಏನಾಕ್ಷಿ ಹಾಗೂ ಗುಂಡೂರಾವ್ ಬಡಾವಣೆಯ ನಿವಾಸಿಗಳನ್ನು ಭದ್ರಾ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಕಾಳಜಿ ಕೇಂದ್ರದಲ್ಲಿ ತಿಂಡಿ, ಊಟ ಹಾಗೂ ಬಿಸಿ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ನಾಲ್ಕು ಬಡಾವಣೆಯಿಂದ ಸುಮಾರು 300 ಜನ ಕಾಳಜಿ ಕೇಂದ್ರದಲ್ಲಿ ಆಶ್ರಯವನ್ನು ಪಡೆದು ಕೊಂಡಿದ್ದಾರೆ.
![Bhadra Dam geat open](https://etvbharatimages.akamaized.net/etvbharat/prod-images/15833170_thu.jpg)
ಪುನರ್ವಸತಿ ಕಲ್ಪಿಸುವಂತೆ ಮನವಿ : ಪ್ರತಿ ಸಲ ಪ್ರವಾಹ ಬಂದಾಗ ನಮ್ಮನ್ನು ಕಾಳಜಿ ಕೇಂದ್ರಕ್ಕೆ ಕರೆದುಕೊಂಡು ಬರ್ತಾರೆ, ನೀರು ಕಡಿಮೆ ಆದ ಮೇಲೆ ಅಧಿಕಾರಿಗಳು ಇಲ್ಲಿ ಬಿಟ್ಟು ಹೋಗುತ್ತಾರೆ. ನಮಗೆ ಐದಾರು ವರ್ಷಗಳ ಹಿಂದೆ ಕಡಕದಕಟ್ಟೆಯಲ್ಲಿ ನಿವೇಶನ ಅಂತ ತೋರಿಸಿದ್ದಾರೆ. ಆದರೆ, ಇದುವರೆಗೂ ಹಕ್ಕು ಪತ್ರ ನೀಡಿಲ್ಲ. ನಮಗೆ ಅದಷ್ಟು ಬೇಗ ನಿವೇಶನ ಹಕ್ಕು ಪತ್ರ ನೀಡಬೇಕು ಎಂದು ಕವಲುಗುಂದಿಯ ಬಾಣಂತಿ ಪ್ರಜ್ಞಾ ವಿನಂತಿಸಿಕೊಂಡಿದ್ದಾರೆ.
ಶಾಸಕರಿಂದ ಮನವಿ : ಭದ್ರಾವತಿ ಶಾಸಕ ಸಂಗಮೇಶ್ರವರು ಅಂಬೇಡ್ಕರ್ ಬಡಾವಣೆಗೆ ಭೇಟಿ ನೀಡಿ ಜನರು ಕಾಳಜಿ ಕೇಂದ್ರಕ್ಕೆ ತೆರಳಬೇಕೆಂದು ವಿನಂತಿ ಮಾಡಿಕೊಂಡರು. ಈ ವೇಳೆ, ಶಾಸಕರ ಮುಂದೆಯೇ ಸ್ಥಳೀಯ ನಗರಸಭೆ ಸದಸ್ಯ ಜಾರ್ಜ್ ಮೇಸ್ತ್ರಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಬಂದು ಹೋಗಿದ್ದು ಬಿಟ್ಟರೆ ಬೇರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಾವೆಲ್ಲ ಬಡವರು ದುಡಿದು ತಿನ್ನುವವರು, ಆದರೆ, ಇಲ್ಲಿಂದ ಕಾಳಜಿ ಕೇಂದ್ರಕ್ಕೆ ತೆರಳಲು ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
![Bhadra Dam geat open](https://etvbharatimages.akamaized.net/etvbharat/prod-images/15833170_thum.jpg)
ಅಲ್ಲದೇ ತಮ್ಮ ಮನೆಗೆ ನೀರು ನುಗ್ಗಿದನ್ನು ಶಾಸಕರನ್ನು ಕರೆದು ಕೊಂಡು ಹೋಗಿ ತೋರಿಸುತ್ತಿದ್ದರು. ಈ ವೇಳೆ, ಶಾಸಕರ ಜೊತೆ ನಗರಸಭೆಯ ಆಯುಕ್ತ ಮನು ಕುಮಾರ್ರವರು ಶಾಸಕರಿಗೆ ಕಾಳಜಿ ಕೇಂದ್ರದ ಮಾಹಿತಿ ನೀಡಿದರು. ಭದ್ರಾ ಅಣೆಕಟ್ಟೆಯಿಂದ ಇನ್ನಷ್ಟು ನೀರು ಬಿಡುಗಡೆ ಮಾಡಿದಲ್ಲಿ ಭದ್ರಾವತಿ ಬಿ.ಹೆಚ್.ರಸ್ತೆಯಲ್ಲಿ ಇರುವ ಪೆಟ್ರೋಲ್ ಬಂಕ್ ಸೇರಿ ಹೋಟೆಲ್ಗಳಿಗೂ ನೀರು ನುಗ್ಗಲಿದೆ.
ಇದನ್ನೂ ಓದಿ: ವಿಡಿಯೋ: ನೀರಿನ ರಭಸದ ನಡುವೆಯೂ ಬ್ರಿಡ್ಜ್ ಗೇಟ್ ತೆರೆಯುವ ಯತ್ನ