ಶಿವಮೊಗ್ಗ: ಜಿಲ್ಲೆಗೆ ಎರಡನೇ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದೆ. ಹೀಗಾಗಿ ಎರಡು ಕೇಂದ್ರೀಯ ವಿದ್ಯಾಲಯವನ್ನು ಹೊಂದಿದ ರಾಜ್ಯದ ಏಕೈಕ ಜಿಲ್ಲೆ ಎಂಬ ಖ್ಯಾತಿಗೆ ಶಿವಮೊಗ್ಗ ಪಾತ್ರವಾಗಿದೆ.
ಜಿಲ್ಲೆಯಲ್ಲಿ ಇದೀಗ ಅಭಿವೃದ್ಧಿಯ ಪರ್ವವೇ ನಡೆದಿದೆ. ರೈಲ್ವೆ ಕೋಚಿಂಗ್ ಸೆಂಟರ್, ಆರ್ಎಎಫ್ ಘಟಕ, ಇಂಡಸ್ಟ್ರಿಯಲ್ ಪೊಲೀಸ್ ಟ್ರೈನಿಂಗ್ ಸೆಂಟರ್ ಸೇರಿದಂತೆ ವಿವಿಧ ಯೋಜನೆಗಳೇ ಹರಿದು ಬಂದಿವೆ. ಇವುಗಳ ಮಧ್ಯೆ ಇದೀಗ ಶಿವಮೊಗ್ಗಕ್ಕೆ ಎರಡನೇ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದೆ.
ಕಳೆದ ಎಂಟು ವರ್ಷಗಳ ಹಿಂದೆ ಒಂದು ಕೇಂದ್ರೀಯ ವಿದ್ಯಾಲಯ ಮಂಜೂರಾಗಿತ್ತು. ನಗರದ ಹೊರವಲಯದ ಸಂತೆಕಡೂರಿನಲ್ಲಿ ಸುಸಜ್ಜಿತವಾದ ಕೇಂದ್ರೀಯ ವಿದ್ಯಾಲಯದ ಯಶಸ್ವಿಯಾಗಿ ನಡೆಯುತ್ತಿದೆ. ಈ ಕೇಂದ್ರೀಯ ವಿದ್ಯಾಲಯದ ಯಶಸ್ಸಿನ ಹಿನ್ನೆಲೆ ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗಕ್ಕೆ ಇನ್ನೊಂದು ಕೇಂದ್ರೀಯ ವಿದ್ಯಾಲಯವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದು, ಸಂಸದರ ಮನವಿ ಪುರಸ್ಕರಿಸಿದ ಕೇಂದ್ರ ಸರ್ಕಾರ ಇದೀಗ ಇನ್ನೊಂದು ಕೇಂದ್ರೀಯ ವಿದ್ಯಾಲಯವನ್ನು ಮಂಜೂರು ಮಾಡಿದೆ.
ಓದಿ-ಹೋಗಿ ಬಾ ಪ್ರೀತಿಯ ಗಜರಾಜ..! ಕಲ್ಲು ಹೃದಯವನ್ನೂ ಕರಗಿಸುವ ದೃಶ್ಯ
ಎರಡನೇ ಕೇಂದ್ರೀಯ ವಿದ್ಯಾಲಯ ಮಂಜೂರಾಗುತ್ತಿದ್ದಂತೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇದನ್ನು ಆರಂಭ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪೂರ್ವ ತಯಾರಿ ಆರಂಭಿಸಿದೆ. ಶಿವಮೊಗ್ಗ ಹೊರವಲಯದ ತ್ಯಾವರೆಚಟ್ನಹಳ್ಳಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ನಿರ್ಧರಿಸಲಾಗಿದೆ. ಜೊತೆಗೆ ಆರಂಭಿಕವಾಗಿ ಶಿವಮೊಗ್ಗದ ರಾಗಿಗುಡ್ಡದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ಶಾಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸಲು ತೀರ್ಮಾನಿಸಲಾಗಿದೆ.
ಈಗಾಗಲೇ ಕೇಂದ್ರದ ತಂಡ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಈ ಮೊರಾರ್ಜಿ ಶಾಲೆಗೆ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದ್ದಾರೆ. ಎರಡು ಕೇಂದ್ರೀಯ ವಿದ್ಯಾಲಯಗಳನ್ನು ಹೊಂದಿದ ರಾಜ್ಯದ ಏಕೈಕ ಜಿಲ್ಲೆ ಎಂಬ ಕೀರ್ತಿಗೆ ಶಿವಮೊಗ್ಗ ಪಾತ್ರವಾಗಿದೆ. ಕೇವಲ ಕೈಗಾರಿಕೆಗಳು ಮಾತ್ರವಲ್ಲದೆ ಶಿವಮೊಗ್ಗ ಜಿಲ್ಲೆ ಇದೀಗ ಶೈಕ್ಷಣಿಕವಾಗಿಯೂ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ.