ಶಿವಮೊಗ್ಗ: ಯುವಕನಿಗೆ ಚಾಕು ಇರಿದ ಪ್ರಕರಣದ ಪ್ರಮುಖ ಆರೋಪಿ ಜಬೀವುಲ್ಲಾ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಈ ಸಂಬಂಧ ಆರೋಪಿ ಪತ್ನಿ ಶಬಾನ ಪ್ರತಿಕ್ರಿಯಿಸಿದ್ದು, ನನ್ನ ಪತಿ ಅಮಾಯಕ. ಅವರ ಮೇಲೆ ಸುಮ್ಮನೆ ಕೇಸ್ ಹಾಕಿ, ಕಾಲಿಗೆ ಶೂಟ್ ಮಾಡಲಾಗಿದೆ. ಇದರ ವಿರುದ್ಧ ನ್ಯಾಯಾಲಯಕ್ಕೆ ಹಾಗೂ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಲಾಗುವುದು ಎಂದು ಜಬೀವುಲ್ಲಾ ಪತ್ನಿ ಶಬಾನ ಹೇಳಿದ್ದಾರೆ.
ನಗರದ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ದೊಡ್ಡಪೇಟೆ ಪೊಲೀಸರು ಸ್ವಾತಂತ್ರ್ಯ ದಿನಾಚರಣೆ ದಿನ ರಾತ್ರಿ 9:30 ರ ಸುಮಾರಿಗೆ ಮನೆಗೆ ಬಂದು ಊಟ ಮಾಡುತ್ತಿದ್ದ ನನ್ನ ಪತಿಯನ್ನು ಬೈಕ್ನಲ್ಲಿ ಕರೆದುಕೊಂಡು ಹೋದರು. ಆದರೆ ಬೆಳಗ್ಗೆ 7 ಗಂಟೆಗೆ ಅವರ ಕಾಲಿಗೆ ಗುಂಡು ಹೊಡೆಯಲಾಗಿದೆ ಎಂಬ ವಿಷಯ ತಿಳಿಯಿತು.
ಸುಳ್ಳು ಕೇಸ್ ಹಾಕಿ ಶೂಟ್: ಮನೆಯಲ್ಲಿದ್ದವರನ್ನು ಕರೆದುಕೊಂಡು ಹೋಗಿ ಕಾಲಿಗೆ ಶೂಟ್ ಮಾಡಲಾಗಿದೆ. ಅಂದು ರಾತ್ರಿ 2:30 ಕ್ಕೆ ಠಾಣೆಯಿಂದ ಕರೆದುಕೊಂಡು ಹೋಗಿ, ನಂತರ ಬೆಳಗಿನ ಜಾವ ನನ್ನ ಕಾಲಿಗೆ ಶೂಟ್ ಮಾಡಲಾಗಿದೆ ಎಂದು ನನ್ನ ಪತಿ ನಾನು ಆಸ್ಪತ್ರೆಗೆ ಹೋದಾಗ ತಿಳಿಸಿದ್ದಾರೆ ಎಂದು ಶಬಾನ ಹೇಳಿದ್ದಾರೆ. ನನ್ನ ಪತಿ ಮೇಲೆ ಈ ಹಿಂದೆ ಒಂದೆರಡು ಕೇಸ್ಗಳು ಇದ್ದವು. ಈಗ ಅವುಗಳಿಂದ ಹೊರ ಬರುತ್ತಿದ್ದಾರೆ. ಆದರೆ ಬದಲಾಗುತ್ತಿದ್ದವರನ್ನು ಚಾಕು ಹಾಕಿದ್ದಾರೆ ಎಂದು ಸುಳ್ಳು ಕೇಸ್ ಹಾಕಿ ಶೂಟ್ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ.. ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
ನನ್ನ ಪತಿ ಹಾಗೇನಾದ್ರೂ ಚಾಕು ಹಾಕಿದ್ರೆ, ಅವರ ನಡವಳಿಕೆಯಲ್ಲಿ ಬದಲಾವಣೆ ಕಾಣುತ್ತಿತ್ತು. ಅವರು ನಾರ್ಮಲ್ ಆಗಿಯೇ ಇದ್ರು, ಪೊಲೀಸರು ಬಂದಾಗ ತಪ್ಪಿಸಿಕೊಳ್ಳದೆ ಅವರ ಜೊತೆ ಮಾತನಾಡಿ, ಆರಾಮ್ ಆಗಿ ಪೊಲೀಸರ ಜೊತೆ ಬೈಕ್ನಲ್ಲಿ ಹೋಗಿದ್ದಾರೆ. ಅವರು ಪೊಲೀಸರ ಜೊತೆ ಬೈಕ್ನಲ್ಲಿ ಹೋಗಿರುವ ಸಿಸಿ ಕ್ಯಾಮರಾದ ವಿಜ್ಯುವಲ್ ನಮ್ಮ ಬಳಿ ಇದೆ. ಇದನ್ನು ಸಂಬಂಧಪಟ್ಟವರಿಗೆ ನೀಡುತ್ತೇವೆ ಎಂದು ಹೇಳಿದರು.
ಈಶ್ವರಪ್ಪನವರು ಸ್ಯಾಂಪಲ್ ಶೂಟ್ ಎಂದಿದ್ದು ಯಾಕೆ: ಪೊಲೀಸರು ಆ ವ್ಯಕ್ತಿಗೆ ಗುಂಡು ಹೊಡೆದ ನಂತರ ಇದು ಸ್ಯಾಂಪಲ್ ಅಂತ ಯಾಕೆ ಹೇಳಬೇಕಿತ್ತು. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ನಾಯಕರುಗಳ ಪ್ರಚೋದನಕಾರಿ ಹೇಳಿಕೆಯಿಂದ ನಮ್ಮ ಮುಸಲ್ಮಾನ ಯುವಕರು ಕೆರಳುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ಹಿಂದೂ ನಾಯಕರುಗಳು ನೀಡುವುದನ್ನು ಬಿಡಬೇಕು ಎಂದು ಪೀಸ್ ಕಮಿಟಿ ಅಧ್ಯಕ್ಷ ರಿಯಾಜ್ ಅಹಮದ್ ಹೇಳಿದರು.