ಶಿವಮೊಗ್ಗ: ಗದಗ ಜಿಲ್ಲೆಯ ಕೃಷಿ ಅಧಿಕಾರಿ ರುದ್ರೇಶಪ್ಪ ಅವರ ಶಿವಮೊಗ್ಗ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ. ಇಲ್ಲಿನ ಚಾಲುಕ್ಯ ನಗರದ ಮನೆಯಲ್ಲಿ 3.50 ಕೋಟಿ ರೂ. ಮೌಲ್ಯದ 7.5 ಕೆ.ಜಿ ಚಿನ್ನ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇದರಲ್ಲಿ 100 ಗ್ರಾಂನ 60 ಚಿನ್ನದ ಬಿಸ್ಕೆಟ್, 50 ಗ್ರಾಂನ 8 ಚಿನ್ನದ ಬಿಸ್ಕೆಟ್, ಇತರೆ ಚಿನ್ನಾಭರಣ ಒಂದೂವರೆ ಕೆ.ಜಿಯಷ್ಟು ಪತ್ತೆಯಾಗಿದೆ. ಇದರಲ್ಲಿ ವಜ್ರದ ಹಾರಗಳು ಹಾಗೂ 3 ಕೆ.ಜಿ ಬೆಳ್ಳಿ ಅಲ್ಲದೆ ಮನೆಯಲ್ಲಿ 15 ಲಕ್ಷ ರೂ. ನಗದು ಪತ್ತೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಅಲ್ಲದೇ, ಶಿವಮೊಗ್ಗದಲ್ಲಿ ಎರಡು ಮನೆ, ಎರಡು ವಾಹನ ಇರುವುದು ತಿಳಿದುಬಂದಿದೆ. ಚಾಲುಕ್ಯ ನಗರ ಹಾಗೂ ಗೋಪಾಳದ ಸಾಯಿ ಇಂಟರ್ ನ್ಯಾಶನಲ್ ಹೋಟೆಲ್ ಹಿಂಭಾಗದಲ್ಲಿ ಮನೆ ಇದೆ. ದಾಳಿಯ ವೇಳೆ ಮನೆಯಲ್ಲಿ ರುದ್ರೇಶಪ್ಪನ ಮಗಳು ಹಾಗೂ ಅತ್ತೆ ಇದ್ದರು. ಗೋಪಾಳದಲ್ಲಿನ ಮನೆಗೆ ಬೀಗ ಹಾಕಿದ ಕಾರಣ ಆ ಮನೆಯಲ್ಲಿ ಇನ್ನೂ ತಪಾಸಣೆ ನಡೆದಿಲ್ಲ.
ಚಾಲುಕ್ಯ ನಗರದ ಮನೆಯ ದಾಳಿಯ ನಂತರ ಗೋಪಾಳದ ಮನೆಗೆ ತೆರಳುತ್ತಾರೆ. ಅಧಿಕಾರಿ ರುದ್ರೇಶಪ್ಪರನ್ನು ಹೆಚ್ಚಿನ ವಿಚಾರಣೆಗೆ ಶಿವಮೊಗ್ಗಕ್ಕೆ ಕರೆ ತರುವ ಸಾಧ್ಯತೆಯಿದೆ. ಅಲ್ಲದೆ ಬ್ಯಾಂಕ್ ಖಾತೆ ಹಾಗೂ ಲಾಕರ್ಗಳ ತಪಾಸಣೆ ನಡೆಯಬೇಕಿದೆ. ಅಲ್ಲದೆ, ಮನೆಯಲ್ಲಿ ಪತ್ತೆಯಾದ ಮರದ ನಾಟಗಳ ಮೌಲ್ಯದ ಬಗ್ಗೆ ತಿಳಿಯಬೇಕಿದೆ.
ಪೂರ್ವ ವಲಯದ ಎಸಿಬಿ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ನಡೆಸಲಾಗಿದ್ದು, ಶಿವಮೊಗ್ಗದ ಡಿವೈಎಸ್ಪಿ ಲೋಕೇಶ್, ಇನ್ಸ್ಪೆಕ್ಟರ್ಗಳಾದ ವಸಂತ ಕುಮಾರ್, ಇಮ್ರಾನ್ ಬೇಗ್ ಸೇರಿದಂತೆ 30 ಕ್ಕೂ ಹೆಚ್ಚು ಸಿಬ್ಬಂದಿ ತಂಡದಲ್ಲಿದ್ದರು.