ಶಿವಮೊಗ್ಗ: ರಸ್ತೆಗಳನ್ನು ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಈ ರಸ್ತೆಗಳನ್ನು ಖಾಸಗಿಯಾಗಿ ಯಾರೂ ಒತ್ತುವರಿ ಮಾಡಿಕೊಳ್ಳುವಂತಿಲ್ಲ. ಅದ್ರೆ ಹೊಸನಗರದಲ್ಲಿ ಓರ್ವ ವ್ಯಕ್ತಿ ರಸ್ತೆ ತನಗೆ ಸೇರಿದ್ದು ಎಂದು ರಸ್ತೆಗೆ ಬೇಲಿ ಹಾಕಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದಾನೆ.
ಹೊಸನಗರದ ಮಾರುತಿಪುರದ ನಿವಾಸಿ ನಾಗರಾಜ್ ಎಂಬಾತ ಮಾರುತಿಪುರ ಹಾಗೂ ಕಚ್ಚಿಗೆಬೈಲು ನಡುವಿನ ರಸ್ತೆಗೆ ಟ್ರಂಚ್ ಹೊಡೆದು, ಬೇಲಿ ಹಾಕಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದಾನೆ. ಈತ ಬೇಲಿ ಹಾಕಿರುವ ರಸ್ತೆಯ ಪಕ್ಕದ ಭೂಮಿ ಈತನಿಗೆ ದರ್ಖಾಸ್ತ್ ಭೂಮಿಯಾಗಿ ಬಂದಿದೆ. ನಕಾಶೆಯಲ್ಲಿ ಖರಾಬ್ ಅಂತ ಇರುವ ಜಾಗದಲ್ಲಿ ರಸ್ತೆ ಬಂದಿದೆ. ಇದರಿಂದ ಖರಾಬ್ ಜಾಗ ಸಹ ನನಗೆ ಸೇರಿದ್ದು ಎಂದು ಬೇಲಿ ಹಾಕಿಕೊಂಡಿದ್ದಾನೆ.
ಇನ್ನು ಈ ರೀತಿ ಬೇಲಿ ಹಾಕಿರುವುದರಿಂದ ಶಾಲಾ ಮಕ್ಕಳಿಗೆ ತೀವ್ರ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳು ಮಾರುತಿಪುರಕ್ಕೆ ಬರಲು ಈಗ ಒಂದು ಕಿ.ಮೀ. ದೂರ ಸಾಗಿ ಬರಬೇಕಿದೆ. ಇದರಿಂದ ಕಚ್ಚಿಗೆ ಬೈಲು, ಬಡಾಯನಕೊಪ್ಪ, ಸೊಗೋಡು ಸೇರಿದಂತೆ ಗುಬ್ಬಿಗಾ ಗ್ರಾಮಗಳಿಗೆ ರಸ್ತೆ ಸಂಚಾರ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ತೆರವು ಮಾಡಿಕೊಡದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ. ಈ ಕುರಿತು ಹೊಸನಗರ ತಹಶೀಲ್ದಾರ್ ಸೂಕ್ತ ಕ್ರಮ ತೆಗೆದುಕೊಂಡು ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.