ಶಿವಮೊಗ್ಗ: ತನ್ನ ಜಾಗದ ಸಮಸ್ಯೆಯನ್ನು ಗ್ರಾಮ ಪಂಚಾಯತ್‌ನವರು ಇತ್ಯರ್ಥ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ರೈತನೊಬ್ಬ ಮೊಬೈಲ್ ಟವರ್ ಏರಿ ಕುಳಿತು ಪ್ರತಿರೋಧ ವ್ಯಕ್ತಪಡಿಸಿದ ಘಟನೆ ಹೊಸನಗರ ತಾಲೂಕಿನ ಕೋಡೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣಮೂರ್ತಿ(47) ಎಂಬುವರು ಮೊಬೈಲ್ ಟವರ್ ಏರಿದ ರೈತ. ತಮಗೆ ಸೇರಿದ ಜಾಗದ ಹದ್ದುಬಸ್ತು ಸಮಸ್ಯೆಯನ್ನು ಪರಿಹರಿಸಿ ಕೊಡಲು ಕೃಷ್ಣಮೂರ್ತಿ ಅವರು ಗ್ರಾಮ ಪಂಚಾಯತ್‌ಗೆ ಹಲವು ಬಾರಿ ಮನವಿ ಮಾಡಿದ್ದರು.
ಯಾವುದೇ ಪರಿಹಾರ ಸಿಗದ ಕಾರಣ, ಕೃಷ್ಣಮೂರ್ತಿ ಅವರು ಬೇಸತ್ತು ಕೋಡೂರು ಗ್ರಾಮ ಪಂಚಾಯತ್ ಎದುರಿನ 150ಅಡಿ ಎತ್ತರದ ಏರ್ಟೆಲ್ ಮೊಬೈಲ್ ಟವರ್ ಏರಿ ಕುಳಿತು ಬೆದರಿಕೆ ಹಾಕಿದ್ದಾರೆ.
ಇದರಿಂದ ಹೆದರಿದ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಕೃಷ್ಣಮೂರ್ತಿ ಅವರನ್ನು ಕೆಳಗೆ ಇಳಿಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಂತರ ಹೊಸನಗರದಿಂದ ಅಗ್ನಿಶಾಮಕ ದಳದವರನ್ನು ಕರೆಯಿಸಲಾಯಿತು. ಕೊನೆಗೂ ಅಗ್ನಿಶಾಮಕ ದಳದವರು ಕೃಷ್ಣಮೂರ್ತಿ ಅವರ ಮನವೊಲಿಸಿ ಟವರ್ನಿಂದ ಕೆಳಗೆ ಇಳಿಸಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ