ಶಿವಮೊಗ್ಗ: ಮೂವರು ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ಕೊಟ್ಟಿರುವ ಖ್ಯಾತಿ ಗಳಿಸಿರುವ ಶಿವಮೊಗ್ಗ ಜಿಲ್ಲೆಯ ರಾಜಕಾರಣ ಮಲೆನಾಡಿನ ನಿಸರ್ಗದ ವೈಭವದಂತೆ ವರ್ಣರಂಜಿತವಾದುದು ಕೂಡ. ಇಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಗೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರೇ ಬೇರೆ ಬೇರೆ ಪಕ್ಷಗಳ ಅಭ್ಯರ್ಥಿಗಳಾಗಿ ಕಣದಲ್ಲಿದ್ದು, ಚುನಾವಣೆಯನ್ನು ಮತ್ತಷ್ಟು ವರ್ಣರಂಜಿತವಾಗಿಸಿದೆ.
ಕ್ಷೇತ್ರದ ಚಿತ್ರಣ:
7 ವಿಧಾನಸಭಾ ಕ್ಷೇತ್ರಗಳನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರ ಹೊಂದಿದ್ದು, ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಉಳಿದ ಆರು ಕ್ಷೇತ್ರಗಳಾದ ಶಿವಮೊಗ್ಗ ಗ್ರಾಮಾಂತರ, ಶಿವಮೊಗ್ಗ ನಗರ, ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ, ಈ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು ಇದು ಬಿಜೆಪಿಯ ಭದ್ರಕೋಟೆಯೆನಿಸಿದೆ. ಉಡುಪಿಯ ಬೈಂದೂರು ವಿಧಾನಸಭಾ ಕ್ಷೇತ್ರವೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು, ಅಲ್ಲೂ ಬಿಜೆಪಿ ಶಾಸಕರಿದ್ದಾರೆ.
ಕ್ಷೇತ್ರದಲ್ಲಿರುವ ಘಟಾನುಘಟಿಗಳು:
ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪುತ್ರ. ಮೂರನೇ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಶಿಕಾರಿಪುರ ಪುರಸಭೆಯ ಅಧ್ಯಕ್ಷರಾಗಿ ರಾಜಕಾರಣ ಆರಂಭಿಸಿದ ರಾಘವೇಂದ್ರ, 2009 ರಲ್ಲಿ ಪ್ರಥಮ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಚೊಚ್ಚಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದರು, ಜೊತೆಗೆ ಸೋಲಿಲ್ಲದ ಸರದಾರ ಎನಿಸಿದ ಎಸ್.ಬಂಗಾರಪ್ಪನವರ ಎದುರು ಭರ್ಜರಿ ಗೆಲುವು ಸಾಧಿಸಿದ್ದರು. ನಂತರದಲ್ಲಿ ಶಿಕಾರಿಪುರ ಶಾಸಕರಾಗಿ ಆಯ್ಕೆಯಾದ ಅವರು ಯಡಿಯೂರಪ್ಪ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮತ್ತೆ ಲೋಕಸಭ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ಈಗ ಮೂರನೇ ಬಾರಿ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಬಿ.ವೈ ರಾಘವೇಂದ್ರರ ಹ್ಯಾಟ್ರಿಕ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಸಿದ್ಧವಾಗಿರುವವರು, ಮತ್ತೊಬ್ಬ ಮಾಜಿ ಸಿಎಂ ದಿ. ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಧು ಬಂಗಾರಪ್ಪನವರು ಎರಡನೇ ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಕಳೆದ ವರ್ಷದ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಇವರು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರವರ ವಿರುದ್ದ ಸೋಲು ಕಂಡಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಬಲವಾಗಿರುವ ಈಡಿಗ ಸಮುದಾಯ ಅಭ್ಯರ್ಥಿ. ಕಾಂಗ್ರೆಸ್ ಜೆಡಿಎಸ್ ಎರಡೂ ಪಕ್ಷಗಳ ಬೆಂಬಲ ಇವರಿಗಿದೆ. ಇನ್ನುಳಿದಂತೆ ಒಟ್ಟು 12 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಜಿಲ್ಲಾಡಳಿತ ಸಿದ್ಧತೆ:
ಜಿಲ್ಲೆಯಲ್ಲಿ ಒಟ್ಟು 2021 ಮತಗಟ್ಟೆಗಳಿಗೆ 8,921 ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವಣೆಗೆ 587 ಜೀಪ್, 14 ಲಾರಿ,3 ಲಾಂಚ್, 151 ಪಿಬ್ಲ್ಯೂಡಿ ವಾಹನಗಳು ಸೇರಿದಂತೆ ಸಾವಿರಕ್ಕೂ ಅಧಿಕ ವಾಹನಗಳನ್ನು ಬಳಕೆ ಮಾಡಿ ಕೊಳ್ಳಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 228 ಹಾಗೂ 35 ಬೈಂದೂರಿನಲ್ಲಿ ಮೈಕ್ರೂ ಅಬರ್ಸವರ್ ನೇಮಕ ಮಾಡಲಾಗಿದೆ. 90 ಅಬರ್ಸವರ್ ಗಳು, 30 ವಿಡಿಯೋ ಗ್ರಾಫರ್ ಗಳು, ಬಿಎಸ್ಎಫ್ ಹಾಗೂ ಸಿಆರ್ಪಿಎಫ್ ಸೇರಿ ಒಟ್ಟು 6 ತುಕಡಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದ್ದಾರೆ. ಉಡುಪಿಯ ಬೈಂದೂರು ವಿಧಾನಸಭಾ ಕ್ಷೇತ್ರವೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಜಿಲ್ಲೆಯಲ್ಲಿ ಒಟ್ಟು 2021 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 362 ಶಿವಮೊಗ್ಗ ಜಿಲ್ಲೆಯಲ್ಲಿ ಹಾಗೂ ಬೈಂದೂರಿನಲ್ಲಿ 75 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಅದೇ ರೀತಿ 284 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಈ ಚುನಾವಣಾ ಕರ್ತವ್ಯ ನಿರ್ವಹಿಸುವವರಿಗೆ ಮೆಡಿಕಲ್ ಕಿಟ್ ನೀಡಲಾಗಿದೆ. ಅಲ್ಲದೆ ಎಲ್ಲಾ ಮತ ಕೇಂದ್ರಗಳಲ್ಲೂ ಸಹ ನೀರಿನ ವ್ಯವಸ್ಥೆ ಮಾಡಲಾಗಿದೆ. ವಿಕಲಚೇತನರಿಗಾಗಿ ಮನೆಯಿಂದ ಮತಕೇಂದ್ರಕ್ಕೆ ಬರಲು ವಾಹನದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಮೊಬೈಲ್ ನಂಬರ್ ನೀಡಲಾಗಿದೆ. ಇದಕ್ಕೆ ಕರೆ ಮಾಡಿದರೆ ವಾಹನ ಬಂದು ಕರೆದು ಕೊಂಡು ಹೋಗಿ ಮತ್ತೆ ವಾಪಸ್ ಕರೆದು ಕೊಂಡು ಬರುತ್ತದೆ. ಪ್ರತಿ ಬೂತ್ ನಲ್ಲೂ ಸಹ ಹಸುಗೂಸಿನೊಂದಿಗೆ ತಾಯಿ ಬಂದರೆ, ತಾಯಿ ಮತ ಹಾಕಿ ಬರುವ ತನಕ ಮಗುವನ್ನು ನೋಡಿ ಕೊಳ್ಳಲು ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಲಾಗಿದೆ. ಮತಕೇಂದ್ರಗಳಲ್ಲಿ ಮತದಾರರನ್ನು ಸರದಿ ಸಾಲಿನಲ್ಲಿ ನಿಲ್ಲಿಸಲು ಎನ್ಸಿಸಿ ಕೆಡೆಟ್ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶಾಂತಿಯುತ, ಪಾರದರ್ಶಕ ಚುನಾವಣೆ ನಡೆಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದ್ದಾರೆ.