ಶಿವಮೊಗ್ಗ: ದೇಶಾದ್ಯಂತ ಜನ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಮಾಡುತ್ತಿದ್ದಾರೆ. ಇದೆ ಹಾದಿಯಲ್ಲಿ ಸಾಗಿರುವ ಸಹೋದರಿಯರಿಬ್ಬರು ತಂದೆ-ತಾಯಿ ಕೊಟ್ಟ ಹಣವನ್ನೆಲ್ಲ ಕೂಡಿಟ್ಟು ಇದೀಗ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ.
ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಜನರು ತಮ್ಮ ಕೈಲಾದಷ್ಟು ದೇಣಿಗೆಯನ್ನು ನೀಡುತ್ತಿದ್ದಾರೆ. ಕೆಲವರು ಕೋಟಿ ರೂ. ದೇಣಿಗೆ ನೀಡಿದರೆ ಇನ್ನೂ ಕೆಲವರು ಲಕ್ಷ ಹಾಗೂ ಸಾವಿರದ ಲೆಕ್ಕದಲ್ಲಿ ದೇಣಿಗೆ ನೀಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರು ಮನೆ ಮನೆಗೆ ತೆರಳಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಇಂದು ಬೊಮ್ಮನಕಟ್ಟೆ ಬಡಾವಣೆಗೆ ಈಶ್ವರಪ್ಪನವರು ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ಹೋದಾಗ, ಇಬ್ಬರು ಹೆಣ್ಣು ಮಕ್ಕಳು ಬಿಗ್ ಶಾಕ್ ಕೊಟ್ಟರು.
ಹೌದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಬೊಮ್ಮನಕಟ್ಟೆ ಬಡಾವಣೆಗೆ ಹೋಗುತ್ತಿದ್ದಂತೆ ಶಾಲೆಗೆ ಹೊರಟಿದ್ದ ಇಬ್ಬರು ಹೆಣ್ಣುಮಕ್ಕಳು ಸಚಿವರ ಬಳಿ ಬಂದು ಅವರನ್ನು ಮನೆಗೆ ಆಹ್ವಾನಿಸಿದರು. ಮಕ್ಕಳು ಕರೆದರು ಎಂಬ ಉದ್ದೇಶಕ್ಕೆ ಈಶ್ವರಪ್ಪ ಮಕ್ಕಳ ಮನೆಗೆ ಹೋಗಿದ್ದು, ಈ ವೇಳೆ ಮಕ್ಕಳು ತಾವು ಉಳಿತಾಯ ಮಾಡಿಟ್ಟಿದ್ದ ಹಣದ ಡಬ್ಬಿಯನ್ನು ಈಶ್ವರಪ್ಪನವರ ಕೈಗಿಟ್ಟರು. ರಾಮಮಂದಿರ ನಿರ್ಮಾಣಕ್ಕೆ ಇದು ನಮ್ಮ ಸಣ್ಣ ದೇಣಿಗೆ ಎಂದು ಮಕ್ಕಳು ಹೇಳಿದಾಗ ಅಲ್ಲಿದ್ದ ಪ್ರತಿಯೊಬ್ಬರು ಮಂತ್ರಮುಗ್ಧರಾಗಿದ್ದರು.
ಶಿವಮೊಗ್ಗದ ಗಾಡಿಕೊಪ್ಪ ಬಡಾವಣೆಯ ಶಂಕರ್ ಮತ್ತು ನೇತ್ರಾವತಿಯ ದಂಪತಿಯ ಪುತ್ರಿಯರಾದ ಛಾಯಾಶ್ರೀ ಹಾಗೂ ಅನುಶ್ರೀ ದೇಣಿಗೆ ನೀಡಿರುವ ಸಹೋದರಿಯರು. ತಮ್ಮ ಹುಟ್ಟುಹಬ್ಬಕ್ಕೆ ಖರ್ಚಿಗೆಂದು ಅಪ್ಪ, ಅಮ್ಮ ನೀಡಿದ ಹಣ ಮತ್ತು ಆಗಾಗ ಇತರೆ ವಸ್ತುಗಳ ಖರೀದಿ ಮತ್ತು ಖರ್ಚಿಗಾಗಿ ಹೆತ್ತವರು ನೀಡುತ್ತಿದ್ದ ಚಿಲ್ಲರೆ ಹಣವನ್ನು ಕೂಡಿಟ್ಟಿದ್ದರು. ಚಿಲ್ಲರೆ ಹಣವನ್ನು ಸಣ್ಣದೊಂದು ಡಬ್ಬಿಯಲ್ಲಿ ಸಂಗ್ರಹಿಸಿ, ನೋಟುಗಳನ್ನು ಹುಂಡಿಯಲ್ಲಿ ಹಾಕಿ ಭದ್ರ ಮಾಡಿದ್ದರು.
ಇನ್ನು ಬೊಮ್ಮನಕಟ್ಟೆಯ ಶಂಕರ್ ಜೀವನ ನಿರ್ವಹಣೆಗಾಗಿ ಪೈಂಟರ್ ಕೆಲಸ ಮಾಡುತ್ತಿದ್ದಾರೆ. ತಾಯಿ ನೇತ್ರಾವತಿ ಗೃಹಿಣಿಯಾಗಿದ್ದು, ಛಾಯಾಶ್ರೀ ಹಾಗೂ ಅನುಶ್ರೀ ಚಿಲ್ಲರೆ ಹಣವನ್ನು ಕೂಡಿಡುವ ಹವ್ಯಾಸ ಬೆಳೆಸಿಕೊಂಡಿದ್ದರು. ಇದುವರೆಗೂ ಮಕ್ಕಳು ತಾವು ಉಳಿದ ಹಣವನ್ನು ಜನ್ಮದಿನ ಹಾಗೂ ಹಬ್ಬಗಳಿಗೆ ಖರ್ಚು ಮಾಡುತ್ತಿದ್ದರು. ಯಾವಾಗ ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತೋ ಅಂದಿನಿಂದ ಮಕ್ಕಳು ತಮ್ಮೆಲ್ಲಾ ಖರ್ಚುಗಳನ್ನು ಕಡಿಮೆ ಮಾಡಿ, ಅಪ್ಪ ನೀಡಿದ ಹಣವನ್ನು ರಾಮ ಮಂದಿರ ನಿರ್ಮಾಣಕ್ಕೆಂದು ಕೂಡಿಡಲಾರಂಭಿಸಿದರು. ಇಬ್ಬರು ಮಕ್ಕಳು ಕೂಡಿಟ್ಟ 5 ಸಾವಿರ ಕ್ಕೂ ಹೆಚ್ಚು ಹಣವನ್ನು ಇಂದು ಸಚಿವ ಈಶ್ವರಪ್ಪನವರಿಗೆ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.