ಮೈಸೂರು: ಕಿಡಿಗೇಡಿಗಳ ಅಟ್ಟಹಾಸದಿಂದ ಎರಡು ಚಿರತೆಗಳು ಬಲಿಯಾಗಿರುವ ದಾರುಣ ಘಟನೆ, ನಂಜನಗೂಡು ತಾಲೂಕಿನ ಕಡಬೂರು ಗ್ರಾಮದಲ್ಲಿ ನಡೆದಿದೆ.
ಕಡಬೂರು ಗ್ರಾಮದ ರಾಮನಾಯಕ ಎಂಬುವರ ಶುಂಠಿ ಬೆಳೆ ಜಮೀನು ಮತ್ತು ಬಾಳೆ ತೋಟದಲ್ಲಿ, 5 ವರ್ಷದ ಹೆಣ್ಣು ಚಿರತೆ ಮತ್ತು 1 ವರ್ಷದ ಮರಿ ಶವವಾಗಿ ಪತ್ತೆಯಾಗಿದೆ.
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಗಳು ವಿಷ ತಿಂದು ಸಾವನ್ನಪ್ಪಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸ್ಥಳಕ್ಕೆ ನಂಜನಗೂಡಿನ ಅರಣ್ಯ ಇಲಾಖೆ ಅಧಿಕಾರಿ ರಕ್ಷಿತ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಶ್ವಾನ ದಳದ ಸಿಬ್ಬಂದಿಯಿಂದ ಕಿಡಿಗೇಡಿಗಳ ಹೆಜ್ಜೆ ಗುರುತು ಪತ್ತೆ ಪ್ರಯತ್ನ ನಡೆದಿದೆ.
ಕಳೆದ ವರ್ಷ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ 3 ಚಿರತೆಗಳು ಸಾವನ್ನಪ್ಪಿದವು. ವರ್ಷ ಕಳೆದರೂ ಕಿಡಿಗೇಡಿಗಳ ಬಂಧನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ. ಅಲ್ಲದೇ, ಕಳೆದ 15 ದಿನಗಳ ಹಿಂದೆ ಮೈಸೂರು ತಾಲೂಕಿನ ಇಲವಾಲದಲ್ಲಿ ಮೂರು ಚಿರತೆಗಳು ಅನುಮಾನಾಸ್ಪಾದವಾಗಿ ಮೃತಪಟ್ಟಿದ್ದವು. ಈಗ ಮತ್ತೆ ನಂಜನಗೂಡು ತಾಲೂಕಿನ ಕಡೂಬೂರು ಗ್ರಾಮದಲ್ಲಿ 2 ಚಿರತೆಗಳು ವಿಷ ತಿಂದು ಸಾವನ್ನಪ್ಪಿವೆ.