ಮೈಸೂರು : ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ರಾಜೀನಾಮೆ ನೀಡುವ ಮುನ್ನವೇ 29 ಮಂದಿ ಪಿಡಿಒಗಳನ್ನು ವರ್ಗಾವಣೆ ಮಾಡಲಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ ಎಂದು ಮೈಸೂರಿನ ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಏ.12 ಮತ್ತು 13ರಂದು ಬಿಜೆಪಿ ಕಾರ್ಯಕಾರಣಿ ಏರ್ಪಡಿಸಲಾಗಿತ್ತು. ಏ.12ರಂದು ಕೆ.ಎಸ್.ಈಶ್ವರಪ್ಪ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅಂದೇ ಗುತ್ತಿಗೆದಾರ ಸಂತೋಷ ಪಾಟೀಲ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಏ. 12ರಂದೇ ಮೈಸೂರು ಜಿಲ್ಲೆಯಲ್ಲಿ 29 ಪಿಡಿಒಗಳನ್ನು ಈಶ್ವರಪ್ಪನವರು ಟ್ರಾನ್ಸ್ಫರ್ ಮಾಡಿದ್ದಾರೆ ಎಂದು ಕೈ ಮುಖಂಡರು ಆರೋಪಿಸಿದ್ದಾರೆ.
ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗಲಿದೆ ಎಂಬ ಮಾಹಿತಿ ಗೊತ್ತಿದ್ದರೂ, ಪಿಡಿಒಗಳನ್ನು ಯಾಕೆ ವರ್ಗಾವಣೆ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಗಳು ಈ ವರ್ಗಾವಣೆ ಆದೇಶ ತಕ್ಷಣ ಹಿಂಪಡೆಯಬೇಕೆಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ. ಯಾವ ಉದ್ದೇಶ ಇಟ್ಟುಕೊಂಡು ಈಶ್ವರಪ್ಪನವರು ಏಕಾಏಕಿ ಪಿಡಿಒಗಳನ್ನು ಟ್ರಾನ್ಸ್ಫರ್ ಮಾಡಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೆ ಎಸ್ ಈಶ್ವರಪ್ಪ ಇಂದು ಸಂಜೆ ರಾಜೀನಾಮೆ ನೀಡಲಿದ್ದಾರೆ : ಸಿಎಂ ಬೊಮ್ಮಾಯಿ