ಮೈಸೂರು: ನೇತ್ರಾವತಿ ನದಿಗೆ ಹಾರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಕುರಿತು ತನಿಖೆ ನಡೆಸಿರುವ ಪೊಲೀಸರಿಗೆ ಘಟನೆ ಹಿಂದಿನ ಕಾರಣ ತಿಳಿದಿದೆ.
ತಂದೆಯ ಅಗಲಿಕೆಯನ್ನು ಸಹಿಸಲಾರದೆ ತಾಯಿಯೊಂದಿಗೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹಾಗೂ ಇವರು ಮೈಸೂರು ಮೂಲದವರು ಅನ್ನೋದು ಗೊತ್ತಾಗಿದೆ.
ಪ್ರಕರಣ ಹಿನ್ನೆಲೆ: ಮೂಲತಃ ಕೊಡಗಿನವರಾದ ಈ ಕುಟುಂಬ, ಮೈಸೂರಿನ ವಿಜಯನಗರದಲ್ಲಿ ವಾಸವಾಗಿದ್ದರು. ಶನಿವಾರ ರಾತ್ರಿ ಕಾಫಿ ಬೆಳೆಗಾರಾದ ಕಿಶನ್ ಮಂದಣ್ಣ (65) ಹೃದಯಾಘಾತದಿಂದ ಮನೆಯಲ್ಲಿ ಮೃತಪಟ್ಟಿದ್ದರು. ಇದನ್ನು ಅರಗಿಸಿಕೊಳ್ಳಲಾಗದೆ ಪತ್ನಿ ಕವಿತಾ ಮಂದಣ್ಣ (55), ಪುತ್ರ ಕೌಶಿಕ್ ಮಂದಣ್ಣ (30) ಹಾಗೂ ಪುತ್ರಿ ಕಲ್ಪಿತಾ ಮಂದಣ್ಣ (20), ತಂದೆ ಶವವನ್ನು ಮನೆಯಲ್ಲೇ ಬಿಟ್ಟು ಸಾಮೂಹಿಕವಾಗಿ ಆತ್ಮಹತ್ಯೆಗೆ ನಿರ್ಧರಿಸಿದ್ದರು ಎನ್ನಲಾಗ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದ ಬಿ.ಸಿ. ರೋಡ್ ರಾಷ್ಟ್ರೀಯ ಹೆದ್ದಾರಿ 75ರ ನೇತ್ರಾವತಿ ನದಿಯ ಸೇತುವೆ ಬಳಿ ತಾವು ಮೂವರು ಹಾಗೂ ಸಾಕಿದ್ದ ನಾಯಿಯನ್ನು ಹಿಡಿದುಕೊಂಡು ನದಿಗೆ ಹಾರಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲೇ ಇದ್ದ ಮೀನುಗಾರರು ಕವಿತಾ ಮಂದಣ್ಣ ಹಾಗೂ ನಾಯಿಯನ್ನು ರಕ್ಷಿಸಿದ್ದರು. ಆದ್ರೆ ಕವಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪುತ್ರಿ ಕಲ್ಪಿತಾ ಮಂದಣ್ಣಳ ಮೃತದೇಹ ಸಿಕ್ಕಿದ್ದು, ಪುತ್ರನ ಮೃತದೇಹಕ್ಕಾಗಿ ನೇತ್ರಾವತಿ ನದಿಯಲ್ಲಿ ಶೋಧ ಮುಂದುವರೆದಿದೆ.
ನಮ್ಮ ತಂದೆಯ ಸಾವಿನ ನೋವನ್ನು ತಡೆದುಕೊಳ್ಳುಲು ಸಾಧ್ಯವಾಗಲಿಲ್ಲ. ಅಲ್ಲದೇ ಅವರಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಮಗ ಕೌಶಿಕ್ ಮಂದಣ್ಣ ಡೆತ್ ನೋಟ್ ಬರೆದಿಟ್ಟು, ಸಾಯುವ ವಿಚಾರವನ್ನು ಫೋನ್ ಮಾಡಿ ಸಂಬಂಧಿಕರಿಗೆ ತಿಳಿಸಿ, ನಾವು ಅಜ್ಜ- ಅಜ್ಜಿ ಇದ್ದ ಕಡೆ ಹೋಗುತ್ತಿದ್ದೇವೆ ಎಂದು ವಾಟ್ಸ್ಯಾಪ್ ಮೆಸ್ಸೇಜ್ ಅನ್ನು ಸಂಬಂಧಿಕರಿಗೆ ಕಳುಹಿಸಿ, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಆಗ ಸಂಬಂಧಿಕರು ಇವರ ಮನೆಗೆ ಬಂದಾಗ ಮನೆಯಲ್ಲಿದ್ದ ಕಿಶನ್ ಮಂದಣ್ಣ ಮೃತದೇಹ ಹಾಗೂ ಡೆತ್ ನೋಟ್ ನೋಡಿ ಗಾಬರಿಗೊಂಡು, ಬಂಟವಾಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ನಂತರ ಈ ಮೂವರು ಆತ್ಮಹತ್ಯೆಗೆ ಶರಣಾಗಿರುವ ವಿಷಯ ಬೆಳಕಿಗೆ ಬಂದಿದೆ.
ಕಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಕೂಡ ತಮ್ಮ ಕಾರನ್ನು ಇದೇ ಸ್ಥಳದಲ್ಲಿ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಮಾಸುವ ಮುನ್ನವೇ ಅದೇ ಸ್ಥಳದಲ್ಲೀಗ ಮತ್ತೊಂದು ದುರಂತ ನಡೆದಿದೆ.