ಮೈಸೂರು : ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯಲ್ಲಿ ಸಂಸ್ಕೃತ ಅಧ್ಯಯನ ಮಾಡಲು ಅವಕಾಶ ಇದೆ ಎಂದು ಕೇಂದ್ರ ಗಣಿ ಮತ್ತು ಕಲ್ಲಿದ್ದಲು, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಇತ್ತೀಚೆಗೆ ನಿಧನರಾದ 'ಸುಧರ್ಮಾ' ಪತ್ರಿಕೆ ಸಂಪಾದಕ ಸಂಪತ್ ಕುಮಾರ್ ಅವರ ಕಚೇರಿಗೆ ಭೇಟಿ ನೀಡಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಸಂಸ್ಕೃತ ಭಾಷೆ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ಪ್ರೋತ್ಸಾಹ ಸಿಕ್ಕಿಲ್ಲ. ಆದರೆ, ನಮ್ಮ ಸರ್ಕಾರ ಬಂದ ಮೇಲೆ ಸಂಸ್ಕೃತ ಸೇರಿದಂತೆ ಎಲ್ಲಾ ಭಾಷೆಗಳಿಗೂ ಪ್ರೋತ್ಸಾಹ ನೀಡುತ್ತಿದೆ, ಸಂಸ್ಕೃತವನ್ನು ಪೋಷಣೆ ಮಾಡುತ್ತಿದೆ ಎಂದರು.
ಸಂಪತ್ ಕುಮಾರ್ ಅವರು 'ಸುಧರ್ಮಾ' ಸಂಸ್ಕೃತ ಪತ್ರಿಕೆಯನ್ನು ಸತತವಾಗಿ ನಡೆಸಿಕೊಂಡು ಬರುತ್ತಿದ್ದರು. ಆದರೆ, ಅವರ ನಿಧನದಿಂದ ಪತ್ರಿಕೆಯ ಬೆನ್ನೆಲುಬು ಮುರಿದಂತಾಗಿದೆ. ಅವರ ಪತ್ನಿ ಪತ್ರಿಕೆ ಬೆಳೆಯಲು ಯಾವ ರೀತಿ ಸಹಾಯ ಕೇಳುತ್ತಾರೋ ಅದರಂತೆ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇನೆ ಎಂದು ತಿಳಿಸಿದರು.
ಮುಡಾದಿಂದ ನಿವೇಶನ : ಸಂಪತ್ ಕುಮಾರ್ ಅವರ ಪತ್ನಿಗೆ ಮುಡಾದಿಂದ ನಿವೇಶನ ನೀಡುವುದಾಗಿ ಮುಡಾ ಅಧ್ಯಕ್ಷ ಹೆಚ್ ವಿ ರಾಜೀವ್ ಅವರು ಸಚಿವರ ಮುಂದೆ ಭರವಸೆ ನೀಡಿದರು.