ಮೈಸೂರು : ರೆಡ್ ಝೋನ್ ಮೈಸೂರಿನಲ್ಲಿ 3ನೇ ಹಂತದ ಲಾಕ್ಡೌನ್ನಲ್ಲಿ ಏನು ಇರುತ್ತೆ, ಏನು ಇರಲ್ಲ ಎಂಬುದರ ಬಗ್ಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
ಜಿಲ್ಲೆ ಕೊರೊನಾ ಹಾಟ್ಸ್ಪಾಟ್ ಆಗಿರುವುದರಿಂದ ರೆಡ್ಝೋನ್ ಎಂದು ಪರಿಗಣಿಸಲಾಗಿದೆ. ಇದರ ಜೊತೆಗೆ ನಗರ ಪ್ರದೇಶದಲ್ಲಿ ಅಗತ್ಯ ಸೇವೆಗಳ ಉತ್ಪಾದನಾ ಕೈಗಾರಿಕೆಗಳನ್ನ ಒಪನ್ ಮಾಡಲು ಅವಕಾಶವಿದ್ದು,ಸಿಬ್ಬಂದಿ ಶೇ.33 ರಷ್ಟು ಮಾತ್ರ ಇರಬೇಕು. ಜೊತೆಗೆ ಹಾರ್ಡ್ವೇರ್ ಅಂಗಡಿಗಳು, ಜೆಲ್ಲಿ ಕ್ರಷರ್, ಸಿಮೆಂಟ್ ಅಂಗಡಿಗಳು ತೆರೆಯಬಹುದು. ವಾಣಿಜ್ಯ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳ ಅಂಗಡಿ ಮಾತ್ರ ತೆರೆಯಲು ಅವಕಾಶವಿದೆ. ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಲೂನ್ ತೆರೆಯಲು ಅವಕಾಶವಿಲ್ಲ. ಆಟೋ ರಿಕ್ಷಾಗಳು,ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಸರ್ಕಾರದ ಆದೇಶದಂತೆ ಸಿಎಲ್-2 ಮತ್ತು ಎಂಎಸ್ಐಎಲ್ನ ಮದ್ಯ ಮಾರಾಟಕ್ಕೆ ಅವಕಾಶವಿದೆ. ಮಾಲ್ಗಳನ್ನ ಒಪನ್ ಮಾಡಲು ಅವಕಾಶವಿಲ್ಲ. ಬೆಳಗ್ಗೆ 6 ರಿಂದ 12 ಗಂಟೆವರೆಗೆ ಅಗತ್ಯ ವಸ್ತುಗಳನ್ನ ಕೊಳ್ಳಬಹುದು. ಮಧ್ಯಾಹ್ನ 12 ಗಂಟೆಯಿಂದ 6 ಗಂಟೆವರೆಗೆ ವಾಹನದಲ್ಲಿ ಬಂದು ಯಾವುದೇ ವಸ್ತುಗಳನ್ನ ಕೊಳ್ಳಲು ಅವಕಾಶವಿಲ್ಲ. ಕಾಲ್ನಡಿಗೆಯಲ್ಲಿ ಬಂದು ವಸ್ತುಗಳನ್ನ ಕೊಳ್ಳಬಹುದು. ಸಂಜೆ 6 ಗಂಟೆ ನಂತರ ಮೆಡಿಕಲ್ ಹಾಗೂ ಹಾಲಿನ ಅಂಗಡಿಗಳು ಮಾತ್ರ ತೆರೆಯಲು ಅವಕಾಶವಿದೆ.
ಅಂದರೆ ಲಾಕ್ಡೌನ್-3ರಲ್ಲೂ ಸಹ ಹಿಂದಿನ ಆದೇಶಗಳು ಸಂಪೂರ್ಣ ಮುಂದುವರೆಯುತ್ತದೆ. ಮೈಸೂರು ಗ್ರೀನ್ ಝೋನ್ಗೆ ಬರುವವರೆಗೂ ಕಟ್ಟುನಿಟ್ಟಿನ ಆದೇಶ ಪಾಲನೆ ಮಾಡಬೇಕು. ಆದೇಶ ಮೀರಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದೆಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 91 ವಾಣಿಜ್ಯ ರಸ್ತೆಗಳನ್ನ ಗುರುತಿಸಲಾಗಿದೆ.
ಈ ರಸ್ತೆಗಳಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವಿದೆ. ಇಲ್ಲಿ ಹಣ್ಣು, ತರಕಾರಿ,ಹಾಲು ದಿನಸಿ, ಔಷಧ ಮುಂತಾದ ಅಗತ್ಯ ಸೇವೆಗಳ ಜೊತೆಗೆ ಮದ್ಯ ಮಾರಾಟಕ್ಕೂ ಅವಕಾಶವಿದೆ. ಅಗತ್ಯ ಸೇವೆಗಳನ್ನ ಹೊರತುಪಡಿಸಿ ಬೇರೆ ಯಾವುದೇ ವಹಿವಾಟಿಗೆ ಅವಕಾಶ ಇಲ್ಲ.