ಮೈಸೂರು : ಶ್ರೀರಂಗಪಟ್ಟಣದಲ್ಲಿನ ಜಾಮೀಯಾ ಮಸೀದಿ ವಿಚಾರವಾಗಿ ವಿನಾಕಾರಣ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ. ಪ್ರಗತಿಪರ ರಾಜ್ಯಕ್ಕೆ ಇದು ಶೋಭೆ ತರುವಂತದಲ್ಲ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾಮೀಯಾ ಮಸೀದಿ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಅರಮನೆ ಮುಂಭಾಗದಲ್ಲಿ ರಂಗನಾಥಸ್ವಾಮಿ ದೇವಾಲಯ ಗಟ್ಟಿಯಾಗಿ ನಿಂತಿದೆ. ಅದರ ಜೀರ್ಣೋದ್ಧಾರಕ್ಕೆ ಟಿಪ್ಪು ನೆರವು ನೀಡಿದ್ದರು. ಇದೆಲ್ಲವೂ ಇತಿಹಾಸದಲ್ಲಿದೆ. ಯಾವುದೋ ನೆಪ ಇಟ್ಟುಕೊಂಡು ಗೊಂದಲ ಸೃಷ್ಟಿಸುವುದು ಸರಿ ಅಲ್ಲ. ಜಾಮೀಯಾ ಮಸೀದಿ ಸಂರಕ್ಷಣೆ ಮಾಡುವಂತಹ ಜವಾಬ್ಧಾರಿ ವಕ್ಫ್ ಮಂಡಳಿಗೆ ಕೊಟ್ಡಿದೆ. ಇದರ ಮಾಲೀಕತ್ವ ನಮಗೆ ಕೊಟ್ಟಿಲ್ಲ. ಆರ್ಕಿಯಾಲಜಿ ಸರ್ವೇ ಆಫ್ ಇಂಡಿಯಾ ಇದರ ಸಂರಕ್ಷಣೆ ಮಾಡಬೇಕು ಎಂದರು.
ಜಾಮೀಯಾ ಮಸೀದಿ ವಿಚಾರವಾಗಿ ಮಂಡ್ಯ ಜಿಲ್ಲಾಡಳಿತ ಹಾಗೂ ವಕ್ಫ್ ಬೋರ್ಡ್ ಮುಖ್ಯಸ್ಥರ ಜೊತೆಯೂ ಮಾತನಾಡಿದ್ದೇನೆ. ದಿನಾಂಕ ನಿಗದಿ ಮಾಡಿ ಒಂದು ಸಭೆ ಮಾಡುವಂತೆ ಸೂಚನೆ ನೀಡಿದ್ದೇನೆ. ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ನೀಡುವ ಮಾಹಿತಿ ಮೇಲೆ ಅದನ್ನು ಹೇಗೆ ನಿರ್ವಹಣೆ ಮಾಡಬೇಕೋ ಹಾಗೆ ಮಾಡುತ್ತೇವೆ. ವಿನಾಕಾರಣ ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದರು.
ಜಾಮೀಯಾ ಮಸೀದಿಯಲ್ಲಿ ಎಲ್ಲಿ ಏನಿತ್ತು, ಏನಿಲ್ಲ ಎಂಬುವುದು ನಮ್ಮ ಕೈಲಿ ಇಲ್ಲ. ಇದು ಪುರಾತತ್ವ ಇಲಾಖೆ ಅಡಿಯಲ್ಲಿದೆ. ಅದನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಅದರ ನೈಜತೆ ಮತ್ತು ಸತ್ಯಾಂಶವನ್ನು ಆರ್ಕಿಯಾಲಜಿ ಆಫ್ ಇಂಡಿಯಾ ತಿಳಿಸಬೇಕಿದೆ. ಅಲ್ಲದೇ ಈ ವಿಚಾರವಾಗಿ ಸರ್ಕಾರ ಕೂಡ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದರು.
ಜನರ ಭಾವನೆ ಕೆರಳಿಸುವುದು ಪ್ರಗತಿಪರ ರಾಜ್ಯಕ್ಕೆ ಶೋಭೆ ಅಲ್ಲ. ನಮಗೆ ಯಾರನ್ನೂ ನೋಯಿಸಬೇಕು ಎಂಬ ಉದ್ದೇಶವಿಲ್ಲ. ನಾವೆಲ್ಲರೂ ಭಾರತಾಂಬೆಯ ಮಕ್ಕಳಾಗಿ ಇರಬೇಕು. ಇರುವಂತದನ್ನೇ ಮುಂದುವರೆಸಿಕೊಂಡು ಹೋಗಬೇಕು. ಸರ್ಕಾರ ಮೌನವಾಗಿ ಇರುವುದರಿಂದ ಅನೇಕ ಹೇಳಿಕೆಗಳು ಬರುತ್ತಿವೆ. ಗುಂಡಿಕ್ಕಿ ಕೊಲ್ಲುತ್ತೇನೆ ಎಂದು ಮಾತನಾಡುವುದು ನಾಗರಿಕತೆಗೆ ಶೋಭೆ ತರುವಂತದ್ದಲ್ಲ ಎಂದರು.
ಅವಹೇಳನಕಾರಿ ವಿಷಯ ಸೇರ್ಪಡೆ ಸರಿಯಲ್ಲ: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಸ್ವರೂಪ ಪಡೆದಿರುವ ವಿಚಾರವಾಗಿ ಮಾತನಾಡಿ, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ರಾಜ್ಯ ಸರ್ಕಾರದ ಕೈವಾಡ ಇರಬಾರದು. ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ರಾಜ್ಯ ಸರ್ಕಾರದ ಕಾರ್ಯ ವೈಖರಿಗೆ ಅಸಮಾಧಾನ ಹೊರಹಾಕಿದರು. ನಾನು ಶಿಕ್ಷಣ ಸಚಿವನಾಗಿದ್ದಾಗ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ರಚಿಸಲಾಗಿತ್ತು.
ಆಗ ರಚಿಸಿದ್ದ 27 ಸಮಿತಿಗಳಲ್ಲಿ 170ಕ್ಕೂ ಹೆಚ್ಚು ಸದಸ್ಯರು ಇದ್ದರು. ಆಗ 1 ರಿಂದ 10ನೇ ತರಗತಿವರೆಗಿನ ಪಠ್ಯವನ್ನು ಪರಿಷ್ಕರಣೆ ಮಾಡಲಾಯಿತು. ಈಗ 11 ಜನ ಸದಸ್ಯರ ಸಮಿತಿಯಲ್ಲಿ ಗೊಂದಲ ಆಗುತ್ತಿದೆ. ಆದರೆ, ಸಮಿತಿಯಲ್ಲಿದ್ದ ಸದಸ್ಯರು ಕುವೆಂಪು, ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗುವಂತಹ ವಿಷಯಗಳನ್ನು ಸೇರಿಸಿದ್ದು ಸರಿಯಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ರಾಷ್ಟ್ರಕವಿ ಕುವೆಂಪುಗಾದ ಅವಮಾನ ಖಂಡಿಸಿ ನಡೆಸುವ ಪಾದಯಾತ್ರೆ ಕೈಬಿಡಲ್ಲ: ಕಿಮ್ಮನೆ ರತ್ನಾಕರ್