ಮೈಸೂರು: ರಾಜ್ಯಾದ್ಯಂತ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾಗಿದ್ದು, ಪರೀಕ್ಷೆಗೆ ಬಂದ ಮಕ್ಕಳಿಗೆ ಶಾಲಾ ಸಿಬ್ಬಂದಿ ಆರತಿ ಬೆಳಗಿ, ಹೂ ನೀಡಿ ಶುಭಕೋರಿದ್ದಾರೆ. ಮೈಸೂರಿನ ಪೀಪಲ್ಸ್ ಪಾರ್ಕ್ ಪರೀಕ್ಷಾ ಕೇಂದ್ರಕ್ಕೆ ಹಾಜರಾದ ವಿದ್ಯಾರ್ಥಿಗಳಿಗೆ ಬಿಇಒ ಜಗದೀಶ್ ಹಾಗೂ ಪಾಲಿಕೆ ಸದಸ್ಯ ಸತೀಶ್ ಶುಭ ಕೋರಿದರು.
ಪರೀಕ್ಷೆ ಬಗ್ಗೆ ಯಾವುದೇ ಆತಂಕ ಬೇಡ. ಒತ್ತಡಕ್ಕೆ ಒಳಗಾಗದೇ ಪರೀಕ್ಷೆ ಬರೆಯಿರಿ ಎಂದು ಬಿಇಒ ಜಗದೀಶ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇನ್ನು ಮಕ್ಕಳೂ ಕೂಡ ಉತ್ಸಾಹದಿಂದಲೇ ಪರೀಕ್ಷೆ ಬರೆಯಲು ಆಗಮಿಸಿದ್ದಾರೆ. ಶಾಲೆಯ ಮುಂಭಾಗ ಬಲೂನುಗಳನ್ನು ಕಟ್ಟಿ ಶೃಂಗಾರ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಕೊರೊನಾ ನಿಯಮ ಪಾಲಿಸುವಂತೆ ಸೂಚನೆ ನೀಡಲಾಯಿತು.
634 ಮಂದಿ ಗೈರು: ಮೈಸೂರು ಜಿಲ್ಲೆಯಲ್ಲಿ ಪ್ರಥಮ ಭಾಷೆ ಪರೀಕ್ಷೆಗೆ 634 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಡಿಡಿಪಿಐ ರಾಮಚಂದ್ರ ರಾಜೇ ಅರಸ್, 634 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 36,151 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಿತ್ತು. ಆದರೆ 35,517 ಮಂದಿ ಹಾಜರಾಗಿದ್ದು, 634 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ಕಟ್ಟಿದವರ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಪರೀಕ್ಷೆಗೆ ಗೈರಾದವರ ಬಗ್ಗೆ ಶಿಕ್ಷಣ ಇಲಾಖೆಯು ಮಾಹಿತಿ ಕಲೆ ಹಾಕುತ್ತಿದ್ದು, ಯಾವ ಕಾರಣಕ್ಕಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಬಂದಿಲ್ಲ ಹಾಗೂ ಖಾಸಗಿಯಾಗಿ ಪರೀಕ್ಷೆ ಕಟ್ಟಿದ ವಿದ್ಯಾರ್ಥಿಗಳ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಡಿಡಿಪಿಐ ಹೇಳಿದ್ದಾರೆ.
ಓದಿ: SSLC ಪರೀಕ್ಷೆಗೆ ಕ್ಷಣಗಣನೆ: ಎಕ್ಸಾಂ ಬರೆಯಲಿದ್ದಾರೆ 8,73,846 ವಿದ್ಯಾರ್ಥಿಗಳು, ಹಿಜಾಬ್ಗೆ ನೋ ಎಂಟ್ರಿ!