ಮೈಸೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಿಮ್ಮನ್ನು ದೇಶದ ಕಾವಲುಗಾರ ಅಂತಾರೆ. ಆದರೆ, ನೀವು ಯಾವ ಚೌಕಿದಾರ್ ಕೆಲಸ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಡೆದ ಭಾರತ್ ಜೋಡೋ ಪೂರ್ವಭಾವಿ ಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು 40 ವರ್ಷದಿಂದ ರಾಜಕಾರಣದಲ್ಲಿದ್ದೇನೆ, ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯೇನ್ರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆ
ಯುವಕರಿಗೆ ಉದ್ಯೋಗ ಕೊಟ್ಟಿಲ್ಲ, ಪಿಎಸ್ಐ ನೇಮಕಾತಿಯಲ್ಲಿ 300 ಕೋಟಿ ಲೂಟಿ ಮಾಡಿದ್ದಾರೆ. ಬಿಜೆಪಿಗೆ ಮಾನ ಮರ್ಯಾದೆ ಇಲ್ಲ. 40% ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ ಮೋದಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ನ್ಯಾಯ ಕೊಡಿಸಬೇಕು, ಆದ್ರೆ ಈವರೆಗೂ ಪತ್ರದ ಬಗ್ಗೆ ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಅವರ ಪಾದಯಾತ್ರೆಯನ್ನು ಐತಿಹಾಸಿಕವಾಗಿ ಮಾಡಬೇಕು. ಇದು ನಮ್ಮ ಕರ್ತವ್ಯ. ಹಿಂದೆ ನಮ್ಮ ಪಕ್ಷದಿಂದ ಮೆಕೇದಾಟು, ಬಳ್ಳಾರಿ ಪಾದಯಾತ್ರೆ ಸೇರಿದಂತೆ ಸಾಕಷ್ಟು ಪಾದಯಾತ್ರೆ ಮಾಡಿದ್ದೇವೆ. ಈಗ ರಾಹುಲ್ ಗಾಂಧಿ ಅವರು 3,500 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದು, ರಾಜ್ಯದಲ್ಲಿ 510 ಕಿ.ಮೀ ಪಾದಯಾತ್ರೆ ಸಾಗುತ್ತದೆ. ಮೈಸೂರು, ಚಾಮರಾಜನಗರ ಜಿಲ್ಲೆಯ ಹೆಚ್ಚು ಜನರು ಈ ನಡಿಗೆಯಲ್ಲಿ ಭಾಗವಹಿಸಬೇಕು ಎಂದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ರಾಜ್ಯದಲ್ಲಿ ಎದುರಾಗುತ್ತಾ ವಿಗ್ನ?! ಯಶಸ್ವಿ ನಡಿಗೆಗೆ ತಡೆಯಾಗುವುದೇ ಅಸಮಾಧಾನ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ನಾನು ಸುಸ್ತಾಗಿದ್ದೇನೆ. 11 ದಿನ ಆಗಿದೆ ಊರು ಬಿಟ್ಟು. ಸಿದ್ದರಾಮಯ್ಯನವರು ಸದನದಲ್ಲಿದ್ದಾರೆ. ಹೀಗಾಗಿ, ನಾನು ಎಲ್ಲಾ ಕಡೆ ಓಡಾಡುತ್ತಿದ್ದೆ. ಕುವೆಂಪು ಅವರು ಹೇಳಿದ ಹಾಗೆ ನಮ್ಮ ದೇಶ ಶಾಂತಿಯ ತೋಟವಾಗಿ ನಿರ್ಮಾಣ ಮಾಡಬೇಕು. ರಾಜ್ಯದಲ್ಲಿ ಭ್ರಷ್ಟಾಚಾರವಿದ್ದು, ಇದನ್ನು ಕೊನೆಗಾಣಿಸಲು ರಾಹುಲ್ ಗಾಂಧಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈ ದೇಶ ಉಳಿಯಲಿ ಎಂದು ಪ್ರಧಾನಮಂತ್ರಿ ಸ್ಥಾನ ತ್ಯಜಿಸಿದ್ದಾರೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಪಾದಯಾತ್ರೆಗೆ ತೆಗೆದುಕೊಂಡ ಜಿಲ್ಲೆಗಳ ಪೈಕಿ ಮೈಸೂರು ದೊಡ್ಡ ನಗರ. ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ರಾಹುಲ್ ಗಾಂಧಿಯವರು ಬೆಳಗ್ಗೆ 7.30 ಕ್ಕೆ ಪಾದಯಾತ್ರೆ ಆರಂಭಿಸುತ್ತಾರೆ. ಪ್ರತಿಯೊಬ್ಬರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.
ಇದನ್ನೂ ಓದಿ: ನಾನು ಒಮ್ಮೊಮ್ಮೆ ಸುಳ್ಳು ಹೇಳುತ್ತೇನೆ, ನೂರಕ್ಕೆ ನೂರು ಪ್ರಾಮಾಣಿಕನಲ್ಲ: ಸದನದಲ್ಲಿ ಸಿದ್ದರಾಮಯ್ಯ ಹೇಳಿಕೆ