ಮೈಸೂರು: ದೇಶದಲ್ಲಿ ಹಿಂದುತ್ವ ಪದ ಕಾಯಿನ್ ಮಾಡಿದ್ದೇ ಸಾವರ್ಕರ್.. ಈತ ಹಿಂದೂ ಮಹಾಸಭಾದ ಅಧ್ಯಕ್ಷನಾಗಿದ್ದ. ಮಹಾತ್ಮಗಾಂಧಿ ಹತ್ಯೆ ಮಾಡಿದ ಆರೋಪ ಎದುರಿಸಿ ಬಿಡುಗಡೆಯಾದವನು. ಈತನ ಇತಿಹಾಸ ಗೊತ್ತಿಲ್ಲದೇ ಚರ್ಚೆ ಮಾಡ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಜಿಲ್ಲಾ ಹಾಗೂ ನಗರ ಕಾಂಗ್ರೆಸ್ ಘಟಕದಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ರಾಜಕೀಯ ಪ್ರಬುದ್ಧತೆ ಇಲ್ಲ. ಖಜಾನೆ ಲೂಟಿ ಆಗಿದೆ ಅಂತಾರೆ. ಇದರ ಬಗ್ಗೆ ಯಡಿಯೂರಪ್ಪ ಅವರನ್ನು ಹೇಳಿದ್ರೆ, ಇಲ್ಲ ಖಜಾನೆ ಖಾಲಿ ಆಗಿಲ್ಲ ಎನ್ನುತ್ತಾರೆ.
ಪ್ರಧಾನಿ ಮೋದಿಗೂ ಹಾಗೂ ಹಿಟ್ಲರ್‌ಗೂ ವ್ಯತ್ಯಾಸವಿಲ್ಲ. ದೇಶದ ಇತಿಹಾಸದಲ್ಲೇ ಇಂತಹ ದ್ವೇಷದ ರಾಜಕಾರಣ ಮಾಡುವವರನ್ನು ನೋಡಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಮೋದಿ ಮಾತನಾಡುತ್ತಿಲ್ಲ. ಹರಿಯಾಣ-ಮಹಾರಾಷ್ಟ್ರ ಚುನಾವಣೆಯಲ್ಲಿ ಸುಳ್ಳಿನ ಪ್ರಚಾರ ಆರಂಭಿಸಿದ್ದಾರೆ ಎಂದು ಕಿಡಿಕಾರಿದರು.
ಏಷ್ಯಾದಲ್ಲಿಯೇ ಭಾರತ ಬಡತನದಲ್ಲಿ 102ನೇ ಸ್ಥಾನದಲ್ಲಿದೆ. ಹಸಿವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮೋದಿ ಕೊಡುಗೆ ಏನು? 42 ವರ್ಷಗಳಲ್ಲಿ ನಿರುದ್ಯೋಗ ಕುಸಿದಿದೆ. ಭಾರತ ಸಮೃದ್ಧವಾಗಿದೆ ಎಂದು ಹೌಡಿ ಕಾರ್ಯಕ್ರಮದಲ್ಲಿ ಸುಳ್ಳು ಹೇಳಿದ್ದಾರೆ. ದೇಶದಲ್ಲಿ ಕೈಗಾರಿಕೆಗಳು ಮುಚ್ಚುತ್ತಿವೆ. ಜಿಎಸ್‌ಟಿಯಿಂದ ಕೈಗಾರಿಕೆಗಳು ನಲುಗಿ ಹೋಗಿವೆ. ಹೀಗೆ ಆದರೆ ದೇಶದ ಭವಿಷ್ಯ ಕಷ್ಟ ಎಂದು ಆತಂಕ ವ್ಯಕ್ತಪಡಿಸಿದರು.
ದೇಶ,ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಎದುರಾಗಿದೆ. ಆರ್ಎಸ್ಎಸ್ ಕಾರ್ಯಕರ್ತರು ಸುಳ್ಳು ಪ್ರಚಾರ ಕೈಗೊಂಡು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಯುವಕರ ಮನಸ್ಸಿನಲ್ಲಿ ಕೋಮುಭಾವನೆ ಬಿತ್ತುತ್ತಿದ್ದಾರೆ. ದೇಶ ಉಳಿಯಬೇಕಾದರೆ ಬಿಜೆಪಿಯನ್ನು ತೊಲಗಿಸಬೇಕು ಎಂದರು.
ಆಪರೇಷನ್ ಕಮಲದಿಂದ ಯಡಿಯೂರಪ್ಪ ಸರ್ಕಾರ ರಚಿಸಿದರು. ಮೂರು ತಿಂಗಳು ಅವರ ಸರ್ಕಾರ ಕಳೆದಿದೆ. ಅಭಿವೃದ್ಧಿ ಕಾರ್ಯ ಮಾಡದೇ ಟೀಕೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಉರುಳಿಸಿ ಅನರ್ಹಗೊಂಡಿರುವ ಶಾಸಕರಿಗೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.