ಮೈಸೂರು: ಸಾ.ರಾ.ಮಹೇಶ್ ಒಡೆತನದ ಸಾರಾ ಕನ್ವೆನ್ಷನ್ ಹಾಲ್ ವಿಚಾರವಾಗಿ ರೋಹಿಣಿ ಸಿಂಧೂರಿ ಹೇಳಿಕೆ ಖಂಡಿಸಿ, ಈ ಸಮಸ್ಯೆ ಇತ್ಯರ್ಥವಾಗುವವರೆಗೂ ಏಕಾಂಗಿ ಪ್ರತಿಭಟನೆ ಮಾಡುವುದಾಗಿ ಸಾ.ರಾ.ಮಹೇಶ್ ಹೇಳಿದ್ದಾರೆ.
ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಇಬ್ಬರ ನಡುವೆ ಅರೋಪ ಹಾಗೂ ಪ್ರತ್ಯಾರೋಪ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾ.ರಾ.ಮಹೇಶ್ ಒಡೆತನದ ಸಾರಾ ಕನ್ವೆನ್ಷನ್ ಹಾಲ್, ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ವೆಬ್‍ಸೈಟ್‍ವೊಂದಕ್ಕೆ ರೋಹಿಣಿ ಸಿಂಧೂರಿ ಹೇಳಿಕೆ ನೀಡಿದ್ದಾರೆ. ಇದರಿಂದ ಕೆಂಡಾಮಂಡಲರಾಗಿರುವ ಸಾ.ರಾ.ಮಹೇಶ್, ರಾಜಕಾಲುವೆ ಮೇಲೆ ಚೌಲ್ಟ್ರಿ ನಿರ್ಮಾಣ ಸತ್ಯವಾಗಿದ್ದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಶಾಸಕ ಸಾ.ರಾ.ಮಹೇಶ್, ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಏಕಾಂಗಿ ಪ್ರತಿಭಟನೆ ಮಾಡುವುದಾಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.