ಮೈಸೂರು: ಕೋವಿಡ್ ಸನ್ನಿವೇಶದಲ್ಲಿ ದುಡ್ಡು ಹೊಡೆಯುವ ಕೆಲಸವನ್ನು ಮನುಷ್ಯತ್ವ ಇರುವವರು ಸಾಧ್ಯವಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಗೆ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ 4-5 ತಿಂಗಳಿನಿಂದ ಕೋವಿಡ್ಗಾಗಿ 550 ಕೋಟಿ ರೂ ಮಾತ್ರ ಖರ್ಚಾಗಿದ್ದು, 2,500 ಕೋಟಿ ಅವ್ಯವಹಾರ ಆಗಿದೆ ಎಂದು ಪ್ರತಿಪಕ್ಷ ನಾಯಕರು ಹೇಳುತ್ತಾರೆ. ಆದರೆ ಅದು ಸಾಧ್ಯವಿಲ್ಲ. ಆರಂಭದ ಕೋವಿಡ್ ದಿನಗಳಲ್ಲಿ ಮಾಸ್ಕ್ ಮುಂತಾದವುಗಳ ಬೆಲೆ ಜಾಸ್ತಿ ಇತ್ತು. ಆದರೂ ಈ ಕೋವಿಡ್ ಸನ್ನಿವೇಶದಲ್ಲಿ ದುಡ್ಡು ಹೊಡೆಯುವ ಕೆಲಸವನ್ನು ಮನುಷ್ಯತ್ವ ಇರುವವರು ಮಾಡಲು ಆಗಲ್ಲ. ಈ ಬಗ್ಗೆ ವಿಪಕ್ಷ ನಾಯಕರು ದಾಖಲೆ ಕೇಳಿದರೆ ಕೊಡುತ್ತೇವೆ. ಅದನ್ನು ಬಿಟ್ಟು ಮೈಸೂರಿನ ರೆಸಾರ್ಟ್ನಲ್ಲಿ ಕುಳಿತುಕೊಂಡು ಮಾತನಾಡಿದರೆ ನಾವು ಮಾಹಿತಿ ಕೊಡಲು ಆಗುವುದಿಲ್ಲ. ವಿಧಾನಸೌಧಕ್ಕೆ ಬಂದು ಮಾಹಿತಿ ಕೇಳಿದರೆ ಕೊಡಲು ಸಿದ್ದ ಎಂದರು.
ಮೈಸೂರಿನಲ್ಲಿ ಕೊರೊನಾ ವೈರಸ್ ಕಂಟ್ರೋಲ್ ತಪ್ಪಿಲ್ಲ. ಜಿಲ್ಲಾಡಳಿತದ ಕಂಟ್ರೋಲ್ನಲ್ಲಿ ಇದೆ. ಎಷ್ಟು ಪಾಸಿಟಿವ್ ಕೇಸ್ಗಳು ಬರುತ್ತಿದೆಯೋ ಅಷ್ಟೇ ಪ್ರಮಾಣದಲ್ಲಿ ನೆಗೆಟಿವ್ ವರದಿಯೂ ಬರುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆಯನ್ನು ಕೈಗೊಂಡಿದೆ ಎಂದು ಸೋಮಶೇಖರ್ ಹೇಳಿದರು.
ನರಸಿಂಹರಾಜ ಕ್ಷೇತ್ರ ಲಾಕ್ಡೌನ್ಗೆ ಚಿಂತನೆ:
ಕೊರೊನಾ ಸೋಂಕು ಹಾಗೂ ಸಾವಿನ ಸಂಖ್ಯೆ ಮೈಸೂರು ನಗರದ ನರಸಿಂಹರಾಜ ಕ್ಷೇತ್ರದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಈ ಕ್ಷೇತ್ರದಲ್ಲಿ ಸೋಂಕು ಸಮುದಾಯಕ್ಕೆ ಹರಡುವುದು ಜಾಸ್ತಿಯಾಗಿದೆ. ಜೊತೆಗೆ ಅಲ್ಲಿ ಸರ್ವೇ ಮಾಡಲು ಹೋದರೆ ಜನರು ಸಹಕರಿಸುತ್ತಿಲ್ಲ. ಇದರಿಂದ ಎನ್.ಆರ್.ಕ್ಷೇತ್ರವು ಕಂಪ್ಲೀಟ್ ಲಾಕ್ಡೌನ್ ಮಾಡಬೇಕಾ? ಎಂಬ ಬಗ್ಗೆ ಶೀಘ್ರವೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇವೆ ಎಂದರು.
ಕೊರೊನಾ ಟೆಸ್ಟ್ ಹೆಚ್ಚಾಗಿ ಮಾಡಲು ಈಗಾಗಲೇ ಕ್ರಮ ಕೈಗೊಂಡಿದ್ದು, ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಶೀಘ್ರವೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇವೆ ಎಂದರು.
ಬೆಂಗಳೂರಿನ ಯಶವಂತಪುರ ಹಾಗೂ ಆರ್.ಆರ್.ನಗರದ ಉಸ್ತುವಾರಿಯನ್ನು ನಾನು ವಹಿಸಿದ್ದೇನೆ. ಈಗಾಗಲೇ ನಿನ್ನೆ ಅಧಿಕಾರಿಗಳ ಸಭೆ ನಡೆಸಿದ್ದು, ಅಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಸಚಿವರು ತಿಳಿಸಿದರು.
ಮೈಸೂರು ಜೈಲಿನ 4 ಜನ ಖೈದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜೈಲಿನ ಅವರ ಕೊಠಡಿಗಳನ್ನು ಸೀಲ್ಡೌನ್ ಮಾಡಲಾಗುವುದು ಎಂದರು. ಮೈಸೂರು ಜಿಲ್ಲಾಧಿಕಾರಿಗಳ ವರ್ಗಾವಣೆ ಬಗ್ಗೆ ವದಂತಿಗಳು ಹರಡಿದ್ದು, ಇದು ಸತ್ಯಕ್ಕೆ ದೂರವಾದದ್ದು ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.