ಮೈಸೂರು: ನನ್ನ ರಾಜಕೀಯ ಅಸ್ತಿತ್ವಕ್ಕಾಗಿ ನಾನು ಬಿಜೆಪಿ ಆಹ್ವಾನವನ್ನು ಒಪ್ಪಿಕೊಂಡು ಮರಳಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ನಾಳೆ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನನ್ನ ಬೆಂಬಲಿಗರೊಂದಿಗೆ ಬಿಜೆಪಿಗೆ ಮರಳಿ ಸೇರ್ಪಡೆಯಾಗಲಿದ್ದೇವೆ. ರಾಜಕೀಯವಾಗಿ ಅಸ್ತಿತ್ವದ ದೃಷ್ಟಿಯಿಂದ ನಾನು ಮರಳಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ. ನಾನು ಯಾವುದೇ ಬೇಡಿಕೆಯನ್ನು ಇಟ್ಟುಕೊಂಡು ಬಿಜೆಪಿಗೆ ಹೋಗುತ್ತಿಲ್ಲ. ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಲೋಕಸಭೆಗೆ ಟಿಕೆಟ್ ಕೊಡಿಸಿದ ಸಿದ್ದರಾಮಯ್ಯ ಅವರಿಗೆ ನಾನು ಆಭಾರಿಯಾಗಿರುತ್ತೇನೆ ಎಂದರು.
ಇನ್ನು, ನಾನು ಮರಳಿ ಬಿಜೆಪಿಗೆ ಸೇರುತ್ತಿರುವ ಬಗ್ಗೆ ಅನರ್ಹ ಶಾಸಕರಾದ ಹೆಚ್.ವಿಶ್ವನಾಥ್ ಜೊತೆ ಸಹ ಚರ್ಚೆ ಮಾಡಿದ್ದೇನೆ. ಅವರು ಸಹ ನೀವು ಮರಳಿ ಬಿಜೆಪಿಗೆ ಬರುತ್ತಿರುವುದು ಒಳ್ಳೆಯದು ಎಂದು ಹೇಳಿದ್ದಾರೆ ಎಂದರು.