ಮೈಸೂರು: ತನ್ನ ಮರಿಗಳ ರಕ್ಷಣೆಗಾಗಿ ನಾಗರ ಹಾವಿನೊಂದಿಗೆ ಸೆಣಸಾಡಿ ಕಡಿತಕ್ಕೊಳಕ್ಕಾಗಿ ಗಂಭೀರ ಸ್ಥಿತಿಯಲ್ಲಿದ್ದ ತಾಯಿ ಶ್ವಾನವನ್ನು ರಕ್ಷಿಸಿರುವ ಘಟನೆ ಮೈಸೂರು ಹೊರ ವಲಯದಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರಿನ ಬನ್ನೂರು ರಿಂಗ್ ರಸ್ತೆ ಬಳಿ ಸಾಯಿ ಬಾಬಾ ಮಂದಿರದ ಸಮೀಪದ ಖಾಲಿ ಜಾಗದಲ್ಲಿ ನಾಯಿಯೊಂದು 7 ಮರಿಗಳಿಗೆ ಜನ್ಮ ನೀಡಿತ್ತು. ಅ.30ರಂದು ಅಲ್ಲಿಗೆ ಬಂದ ನಾಗರ ಹಾವೊಂದು ಮರಿಗಳ ಮೇಲೆ ದಾಳಿಗೆ ಮುಂದಾಗಿತ್ತು. ಇದನ್ನು ಗಮನಿಸಿದ ತಾಯಿ ಶ್ವಾನ ಮರಿಗಳ ರಕ್ಷಣೆಗೆ ನಿಂತಿತ್ತು. ಈ ವೇಳೆ ಹಾವು ಕಚ್ಚಿದ್ದರಿಂದ ನಾಯಿಯ ನರಮಂಡಲಕ್ಕೆ ವಿಷವೇರಿ ಅದು ನಿತ್ರಾಣವಾಗಿತ್ತು. ಆ ವೇಳೆ ಹಾವು ನಾಯಿ ಮರಿಯೊಂದನ್ನು ಬಲಿ ಪಡೆದಿದೆ.
ಇದನ್ನು ಗಮನಿಸಿದ ಸ್ಥಳೀಯ ನಿವಾಸಿ ದರ್ಶನ್ ಉರಗ ರಕ್ಷಕ ಸ್ನೇಕ್ ಬಿ.ಶಿವಕುಮಾರ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಶಿವಕುಮಾರ್, ಹಾವಿನ ವಿಷ ನಾಯಿಯ ನರಮಂಡಲಕ್ಕೆ ಏರಿರುವುದು ಖಚಿತಪಡಿಸಿಕೊಂಡು ಸ್ಥಳೀಯರ ಸಹಕಾರದಿಂದ ತಾಯಿ ನಾಯಿ ಹಾಗು ಅದರ ಮರಿಗಳನ್ನು ರೂಪಾನಗರದ ಪೀಪಲ್ ಫಾರ್ ಅನಿಮಲ್ಸ್ ಗೆ ಕರೆದೊಯ್ದಿದ್ದಾರೆ.
ಪಿಎಫ್ಎ ಗೌರವ ವ್ಯವಸ್ಥಾಪಕ ಟ್ರಸ್ಟಿ ಸವಿತಾ ನಾಗಭೂಷಣ್, ಹಾವು ಕಡಿತಕ್ಕೊಳಗಾದ ನಾಯಿಗೆ 10 ಟ್ಯೂಬ್ ಆ್ಯಂಟಿ ವೇನಮ್ (ವಿಷಪೂರಿತ ಹಾವು ಕಡಿದಾಗ ಬಳಸುವ ಔಷಧಿ) ವ್ಯವಸ್ಥೆ ಮಾಡಿದ್ದಾರೆ. ತುರ್ತು ಚಿಕಿತ್ಸೆ ಹಾಗು ನಾಲ್ಕು ದಿನದ ಚಿಕಿತ್ಸೆ ನೀಡಿದ ಬಳಿಕ ನಾಯಿ ಪ್ರಾಣಾಪಾಯದಿಂದ ಪಾರಾಗಿದೆ. ನಾಯಿ ಮರಿಗಳಿಗೆ ಮೇಕೆ ಹಾಲನ್ನು ಕುಡಿಸಿ ಆರೈಕೆ ಮಾಡಲಾಗುತ್ತಿದೆ.
ಸದ್ಯ ತಾಯಿ ನಾಯಿ ಹಾಗು ಮರಿಗಳು ಸುರಕ್ಷಿತವಾಗಿದ್ದು, ಬೇರೆಡೆ ಸ್ಥಳಾಂತರಿಸಲಾಗಿದೆ. ಘಟನೆ ನಡೆಯುವ ಮುನ್ನ ಹಾವು ಓಡಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಉರಗ ಸಂರಕ್ಷಕ ಎ.ಎಸ್. ಪ್ರದೀಪ್ಗೆ ಮಾಹಿತಿ ನೀಡಿದ್ದರು. ಅವರು ಬಂದು ಹುಡುಕಾಟ ನಡೆಸಿದರೂ ಹಾವು ಪತ್ತೆಯಾಗಿರಲಿಲ್ಲ. ಆದರೆ ಘಟನೆ ನಡೆದ ಬಳಿಕ ಹಾವನ್ನು ರಕ್ಷಣೆ ಮಾಡಿದ್ದು, ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.