ಮೈಸೂರು: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಪೊಲೀಸರಿಗೆ ಹೆದರಿದ ಯುವಕ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಹಾರೋಪುರ ಗ್ರಾಮದಲ್ಲಿ ನಡೆದಿದೆ.
ಪತ್ನಿಯನ್ನು ಹೆರಿಗೆಗೆ ಕಳುಹಿಸಿದ ಆರೋಪಿ ಪತಿ, ಅತ್ತಿಗೆಯ (ಹೆಂಡತಿಯ ಅಕ್ಕ) ಮಗಳ (14) ಮೇಲೆ ಅತ್ಯಾಚಾರ ಎಸಗಿದ್ದಾನೆ. ಆ ಬಳಿಕ ಪೊಲೀಸರಿಗೆ ಹೆದರಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಂಬಂಧದಲ್ಲಿ ತಂದೆ ಸಮನಾದ ಪ್ರದೀಪ್ (26) ಅತ್ಯಾಚಾರ ಆರೋಪಿಯಾಗಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವಿವರ:
ಹಾರೋಪುರ ಗ್ರಾಮದಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿರುವ ಪ್ರದೀಪ್, ಹೆಂಡತಿಯನ್ನು ತವರು ಮನೆಗೆ ಹೆರಿಗೆಗಾಗಿ ಕಳುಹಿಸಿದ್ದ. ಈ ಸಂದರ್ಭದಲ್ಲಿ ಹೆಂಡತಿಯ ಅಕ್ಕನ ಮಗಳನ್ನು ತಬ್ಬಿಕೊಂಡು ಫೋಟೋ ತೆಗೆದುಕೊಂಡಿದ್ದು ಬೇರೆಯವರಿಗೆ ಆ ಫೋಟೋ ತೋರಿಸುವುದಾಗಿ ಬ್ಲಾಕ್‌ಮೇಲ್ ಮಾಡಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.
ಅಲ್ಲದೆ, ಮುಂದಿನ ದಿನಗಳಲ್ಲಿ ನಿರಂತರವಾಗಿ ಅತ್ಯಾಚಾರ ನಡೆಸಿದ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಾಳೆ. ಪ್ರದೀಪ್ ತಾನು ನಡೆಸಿದ ಕೃತ್ಯ ಮುಚ್ಚಿಹಾಕಲು ಖಾಸಗಿ ಲ್ಯಾಬ್‌ನಲ್ಲಿ ಬಾಲಕಿಗೆ ಗರ್ಭಪಾತ ಮಾಡಿಸಲು ಮುಂದಾಗಿದ್ದಾನೆ. ಈ ವೇಳೆ ಲ್ಯಾಬ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗುತ್ತಿದ್ದಂತೆೆ ಪ್ರದೀಪ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಅಪ್ರಾಪ್ತೆಯನ್ನು ಪುನರ್ವಸತಿ ಕೇಂದ್ರದಲ್ಲಿ ಬಿಟ್ಟಿದ್ದಾರೆ.