ಮೈಸೂರು: ಹಿಜಾಬ್ ವಿವಾದದ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಹಿಜಾಬ್ ಪರ ಹಾಗೂ ವಿರೋಧ ಪ್ರತಿಭಟನೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ಮೈಸೂರು ನಗರ ಪೋಲಿಸ್ ಆಯುಕ್ತರಾದ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿವಾದ ಹಲವಾರು ಜಿಲ್ಲೆಗಳಲ್ಲಿ ಘರ್ಷಣೆಯನ್ನು ಉಂಟುಮಾಡಿದೆ. ಹಲವಾರು ಕಡೆಗಳಲ್ಲಿ ಕಲ್ಲು ತೂರಾಟಗಳು ನಡೆದಿದ್ದು, ಶಾಂತಿ ಕದಡುವಂತಹ ಸನ್ನಿವೇಶಗಳು ಸೃಷ್ಟಿಯಾಗಿದ್ದು. ಈ ಹಿನ್ನೆಲೆ ರಾಜ್ಯಾದ್ಯಂತ ಮೂರು ದಿನಗಳ ಕಾಲ ರಜೆ ನೀಡಿದ್ದಾರೆ. ಹೀಗಿದ್ದರೂ ರಾಜ್ಯದಲ್ಲಿ ಹಲವು ಕಡೆ ಬಿಗುವಿನ ವಾತಾವರಣ ಮುಂದುವರೆದಿದೆ ಎಂದರು.
ಓದಿ: ಹಿಜಾಬ್ ವಿವಾದ: ಶಾಲಾ, ಕಾಲೇಜು ರಜೆ ವಿಸ್ತರಣೆ ಬಗ್ಗೆ ಸಂಜೆ ಸಭೆಯಲ್ಲಿ ತೀರ್ಮಾನ- ಸಿಎಂ
ಬಿಗುವಿನ ವಾತಾವರಣ ಹಿನ್ನೆಲೆ ಮೈಸೂರಿನಲ್ಲಿ ಶಾಂತಿ ಕಾಪಾಡುವ ಸಲುವಾಗಿ ಹಿಜಾಬ್ ಪರವಾಗಲಿ ಅಥವಾ ವಿರೋಧಿಸಿ ಪ್ರತಿಭಟನೆ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಮೈಸೂರು ನಗರ ಪೋಲಿಸ್ ಆಯುಕ್ತರಾದ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.
ಪ್ರತಿಭಟನೆ ನಡೆಸಲು ಅನುಮತಿ ಕೋರಲು ಜಿಲ್ಲಾಧಿಕಾರಿ ಕಚೇರಿಗೆ, ಆಯುಕ್ತರ ಕಚೇರಿಗೆ ಬರುವುದು, ಹಠಾತ್ತನೆ ಪ್ರತಿಭಟನೆ ನಡೆಸುವುದು, ಗುಂಪು ಸೇರುವುದು ಕಂಡುಬಂದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಕಾನೂನು ಮೀರಿ ಪ್ರತಿಭಟನೆ ನಡೆಸಿ ಸಮಾಜದ ಶಾಂತಿ ಕದಡಲು ಪ್ರಯತ್ನಿಸಿದರೆ ಅನಿವಾರ್ಯವಾದರೆ ಮೈಸೂರು ನಗರದಾದ್ಯಂತ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಪೋಲಿಸ್ ಆಯುಕ್ತರು ತಿಳಿಸಿದ್ದಾರೆ.