ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ನೆರೆ ಸಂತ್ರಸ್ತರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಿಳಿಸಿದರು.
ನಾಡಹಬ್ಬ ದಸರಾ ಸಂಬಂಧ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಸಿಎಂ, ಮೊದಲು ಚಾಮುಂಡಿ ತಾಯಿಯ ದರ್ಶನ ಪಡೆದು, ನಂತರ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಪ್ರವಾಹಕ್ಕೆ ಒಳಗಾಗಿವೆ. ನಿನ್ನೆ ರಾತ್ರಿ ನರೇಂದ್ರ ಮೋದಿ ಅವರು ಕರೆ ಮಾಡಿದ್ದು, ನೆರೆ ಸಂತ್ರಸ್ತರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿರುವುದಾಗಿ ಸಿಎಂ ತಿಳಿಸಿದರು.
ಕಲಬುರಗಿ ಪ್ರವಾಹ ಪ್ರದೇಶದಲ್ಲಿ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ 51,700 ರೈತರ ಬೆಳೆ ಪರಿಹಾರಕ್ಕಾಗಿ ಒಟ್ಟು 36.500 ಕೋಟಿ ರೂ. ಜಮಾ ಮಾಡಲಾಗಿದೆ. ಆಗಸ್ಟ್ನಲ್ಲಿ ಉಂಟಾದ ಪ್ರವಾಹದಿಂದ ಒಟ್ಟು 9,952 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅವರು ಮಾಹಿತಿ ನೀಡಿದರು.
ಚಾಮುಂಡಿ ಬೆಟ್ಟದ ದೇವಿಕೆರೆ ಹಾಗೂ ಮೆಟ್ಟಿಲುಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತೇವೆ. ಶೀಘ್ರ ಹಣ ಮಂಜೂರಾತಿ ಮಾಡಿ ದೇವಾಲಯದ ಅಭಿವೃದ್ಧಿಗೆ ಮುಂದಾಗುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಕೋವಿಡ್ ತುರ್ತು ಪರಿಸ್ಥಿತಿಯ ನಡುವೆ ವೈದ್ಯರು ನೀಡಿದ ಸೇವೆಯನ್ನು ಸರ್ಕಾರ ಗಮನಿಸಿ ಈ ಬಾರಿ ಹಬ್ಬವನ್ನು ವೈದ್ಯರಿಂದ ಉದ್ಘಾಟನೆ ಮಾಡಿಸಿದ್ದೇವೆ. ಈ ಸಂಕಷ್ಟದಲ್ಲಿ ನಾಡಹಬ್ಬದ ಇತಿಹಾಸಕ್ಕೆ ಕುಂದು ಉಂಟಾಗದಂತೆ ಆಚರಿಸಲಾಗುತ್ತಿದೆ. ನಾಡ ದೇವತೆ ಚಾಮುಂಡೇಶ್ವರಿ ತಾಯಿ ಈ ರೋಗದಿಂದ ನಾಡನ್ನು ಮುಕ್ತ ಗೊಳಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿರುವುದಾಗಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.