ಮೈಸೂರು: ಮಸೀದಿ, ದರ್ಗಾಗಳಲ್ಲಿ ಬರೀ ಉರ್ದು ಭಾಷೆಗೆ ಮಾತ್ರ ಆದ್ಯತೆ ನೀಡುವುದು ಸಹಜ. ಆದ್ರೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ಬೆಳಲೆ ಗೇಟ್ ಬಳಿ ಇರುವ ದರ್ಗಾ ಇದಕ್ಕೆ ತದ್ವಿರುದ್ದ. ಅದೇನು ವಿಶೇಷ ಅಂತೀರಾ, ಇಲ್ಲಿದೆ ನೋಡಿ.
ಬೆಳಲೆ ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಹಜರತ್ ಸೈದಾನಿ ಬಿಬಿಮಾ ದರ್ಗಾದಲ್ಲಿ ಕನ್ನಡದಲ್ಲೇ ಸಂದೇಶ ನೀಡಿ, ಪ್ರಾರ್ಥನೆ ಮಾಡಲಾಗುತ್ತದೆ. ಹಾಗಾಗಿ ಇದು ರಾಜ್ಯದಲ್ಲೇ ಪ್ರಥಮ 'ಕನ್ನಡ ದರ್ಗಾ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೌದು, ಪ್ರತಿ ಗುರುವಾರ ಕನ್ನಡದಲ್ಲಿ ಪ್ರಾರ್ಥನೆ ಮಾಡುವ ಮೂಲಕ ಇಲ್ಲಿನ ಮುಸ್ಲಿಮರು ಕನ್ನಡ ಭಾಷಾ ಪ್ರೇಮ ಮೆರೆದಿದ್ದಾರೆ. ಧರ್ಮಸ್ಥಳ ಮೂಲದ ಅಂಬಟಿ ಉಸ್ತಾದ್ ಅವರು ಕನ್ನಡದಲ್ಲಿ ದುವಾ(ಶುಭ ಸಂದೇಶ) ನೀಡುತ್ತಾರೆ. ಸಾಮರಸ್ಯ ಹಾಗೂ ಭಾವೈಕ್ಯತೆಗೆ ಒತ್ತು ನೀಡಿರುವ ಈ ದರ್ಗಾಗೆ ಎಲ್ಲಾ ಸಮುದಾಯದವರು ಸಂಕಷ್ಟಗಳ ಪರಿಹಾರಕ್ಕಾಗಿ ಬರುತ್ತಾರೆ. ಉರ್ದು ಭಾಷೆಯಲ್ಲಿ ಪ್ರಾರ್ಥನೆ ಮಾಡಿದ್ರೆ ಕನ್ನಡಿಗರಿಗೆ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೆ ಪ್ರತಿ ಗುರುವಾರ ಒಂದು ದಿನ ಕನ್ನಡದಲ್ಲೇ ಪ್ರಾರ್ಥನೆ ಮಾಡಲಾಗುತ್ತದೆ.
ಒಟ್ಟಿನಲ್ಲಿ ಹಜರತ್ ಸೈದಾನಿ ದರ್ಗಾದಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಕನ್ನಡದಲ್ಲೇ ಶುಭ ಸಂದೇಶಗಳನ್ನ ಸಾರುವ ಪದ್ಧತಿ ಜಾರಿಯಲ್ಲಿದ್ದು, ಇವರ ಕನ್ನಡ ಪ್ರೇಮಕ್ಕೆ ಭಕ್ತರು ಫಿದಾ ಆಗಿದ್ದಾರೆ.