ಮೈಸೂರು: ಪ್ರತಿನಿತ್ಯ 3 ಗಂಟೆ ಕಚೇರಿಯಲ್ಲಿ ಸಭೆ ಮಾಡಿದರೆ ಕೆಲಸವಾಗುವುದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಗ್ರಾಮಾಂತರ ಭಾಗಗಳಿಗೆ ಹೋಗಬೇಕೆಂದು ಸಲಹೆ ನೀಡುತ್ತೇನೆ ಎಂದು ಮತ್ತೊಮ್ಮೆ ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಇಂದು ಮುಕ್ತಿಧಾಮದಲ್ಲಿ ಅಧಿಕಾರಿಗಳ ಜೊತೆಗೂಡಿ ಪರಿಶೀಲನೆ ನಡೆಸಿದ ಸಂಸದ ಪ್ರತಾಪ್ ಸಿಂಹ, ಇಂತಹ ಸನ್ನಿವೇಶದಲ್ಲೂ ಸಹ ಉಸ್ತುವಾರಿ ಸಚಿವರು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಕೆಲಸ ಮಾಡುತ್ತಿದ್ದಾರೆ. ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅಭಿರಾಮ್ ಜಿ. ಶಂಕರ್ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದರು. ಅದೇ ರೀತಿ ಎಸ್ಪಿ ರಿಶ್ಯಂತ್, ಪೊಲೀಸ್ ಕಮಿಷನರ್ ಚಂದ್ರಗುಪ್ತ ಒಳ್ಳೆಯ ಕೆಲಸ ಮಾಡಿದ್ದರು. ಅವರಿಗೆ ನಾಗರಿಕರ ಪರವಾಗಿ ಹೂವಿನ ಪುಷ್ಪಾರ್ಚನೆ ಮಾಡಲಾಗಿತ್ತು. ಅಂತಹ ವ್ಯವಸ್ಥೆ ಮೈಸೂರಿನಲ್ಲಿದೆ. ನಾನು ಯಾರನ್ನೂ ವೈಯಕ್ತಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಹೇಳುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಒಟ್ಟಾಗಿ ಕೆಲಸ ಮಡಬೇಕು ಎಂದರು.
ಮೈಸೂರು ನಗರದಲ್ಲಿ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಕೋವಿಡ್ ಮಿತ್ರ ಹಾಗೂ ಕೋವಿಡ್ನಿಂದ ಸತ್ತವರಿಗೆ ಒಳ್ಳೆಯ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದಾರೆ. ಇಂತಹ ಸಂದರ್ಭಗಳಲ್ಲಿ ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕೆಂಬುದು ನನ್ನ ಆಶಯ ಎಂದರು.
ಮೈಸೂರು ಗ್ರಾಮಾಂತರ ಭಾಗದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹಾಗೂ ಸಾವಿನ ಪ್ರಮಾಣ ಹೆಚ್ಚಾಗಿದ್ದು, ಮೈಸೂರು ನಗರದಲ್ಲಿ 151 ಸಾವುಗಳು ಕೋವಿಡ್ನಿಂದ ಸಂಭವಿಸಿವೆ. ಗ್ರಾಮಾಂತರ ಭಾಗದಲ್ಲಿ 337ಕ್ಕಿಂತಲು ಹೆಚ್ಚು ಸಾವುಗಳು ಸಂಭವಿಸಿವೆ. ಜಿಲ್ಲೆಯ 6 ತಾಲೂಕುಗಳಲ್ಲಿ - 350 ಬೆಡ್ಗಳಿವೆ. ಮೈಸೂರು ನಗರದಲ್ಲಿ 6 ಸಾವಿರ ಬೆಡ್ಗಳು ಇದ್ದು, ಪಕ್ಕದ ಜಿಲ್ಲೆಯಿಂದ ಚಿಕಿತ್ಸೆಗಾಗಿ ಬಂದವರು ಇಲ್ಲಿ ಮೃತಪಟ್ಟರೆ ಅವರ ಸಾವು ಇಲ್ಲಿಯ ಲೆಕ್ಕಕ್ಕೆ ಸೇರುತ್ತದೆ. ಆದರೆ, ಹಳ್ಳಿಯಲ್ಲಿ ಪ್ರತಿನಿತ್ಯ ಸೋಂಕಿತರ ಪ್ರಮಾಣ ಹಾಗೂ ಸಾವಿನ ಪ್ರಮಾಣ ಹೆಚ್ಚಾಗಿದ್ದರೂ ನೀವು ಪ್ರತಿನಿತ್ಯ 3 ಗಂಟೆ ಸಭೆ ಮಾಡಿಕೊಂಡರೆ ಕೆಲಸ ಆಗುವುದಿಲ್ಲ. ಗ್ರಾಮಾಂತರ ಪ್ರದೇಶಕ್ಕೆ ಹೋಗಬೇಕು ಎಂದು ಸಲಹೆ ನೀಡುತ್ತೇನೆ ಎಂದು ಪರೋಕ್ಷವಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ನಡೆಸಿದರು.