ಮೈಸೂರು : ಭಾರಿ ಬಿರುಗಾಳಿ ಸಹಿತ ಮಳೆಗೆ ಹುಣಸೂರು ತಾಲೂಕಿನ ಉದ್ದೂರು ಗ್ರಾಮದ ನಿವಾಸಿ ರಾಮಚಂದ್ರ ನಾಯಕ ಅವರಿಗೆ ಸೇರಿದ್ದ ಕೋಳಿ ಫಾರ್ಮ್ ನೆಲಸಮಗೊಂಡಿದೆ. ಘಟನೆಯಿಂದ ಬಡ ಕುಟುಂಬವೀಗ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಮೂರು ವರ್ಷಗಳ ಹಿಂದೆ 25 ಲಕ್ಷ ರೂ. ಖರ್ಚು ಮಾಡಿ ಕೋಳಿ ಫಾರ್ಮ್ ಮಾಡಿ ಕೋಳಿ ಸಾಕಾಣಿಕೆ ಮಾಡುತ್ತಿದ್ದರು.
ಆದರೆ, ಮಂಗಳವಾರ ರಾತ್ರಿ ಸುರಿದ ಮಳೆಗೆ ಕೋಳಿ ಫಾರ್ಮ್ ಸಂಪೂರ್ಣ ನೆಲಸಮವಾಗಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಈಗ ದಿಕ್ಕೇ ತೋಚದಂತಾಗಿದೆ. ಬ್ಯಾಂಕ್ನಲ್ಲಿ ಸುಮಾರು 10 ಲಕ್ಷ ರೂ. ಸಾಲ, ಹೊರಗಡೆ 10 ಲಕ್ಷ ರೂ. ಕೈ ಸಾಲ ಮಾಡಿದ್ದರು. ಈಗ ಸಾಲ ತೀರಿಸುವುದ್ಹೇಗೆ ಎಂದು ಆತಂಕದಲ್ಲಿದ್ದಾರೆ. ನಮಗೆ ಸರ್ಕಾರ ಪರಿಹಾರ ಕೊಡಬೇಕು. ನಮಗೆ ಸಾಲ ತೀರಿಸಲು ಬೇರೆ ಕೆಲಸ ಇಲ್ಲ ಎಂದು ಕಣ್ಣೀರು ಹಾಕಿದರು.
ಇದನ್ನೂ ಓದಿ: ರಾಯಚೂರಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿ: ಮೂವರು ಸಾವು, ಇಬ್ಬರು ಗಂಭೀರ
ಬ್ಯಾಂಕ್ನಲ್ಲಿ ಯಾವುದೇ ಪರಿಹಾರ ಸಹಾಯ ಕೊಡುವುದಿಲ್ಲ. ಮತ್ತೆ ಸಾಲ ಮನ್ನಾ ಆಗುವುದಿಲ್ಲ. ಇನ್ನು ಜನರ ಹತ್ತಿರ ಮಾಡಿರುವ ಸಾಲ ತೀರಿಸಲೇಬೇಕು. ಇವುಗಳನ್ನು ತೀರಿಸುವುದ್ಹೇಗೆ ಎಂಬ ಚಿಂತೆ ಕಾಡತೊಡಗಿದೆ. ಶಾಸಕರಾದ ಹೆಚ್ ಪಿ ಮಂಜುನಾಥ್ ಅವರು ಅಧಿಕಾರಿಗಳ ಜೊತೆ ಚರ್ಚಿಸಿ ನಮಗೆ ಪರಿಹಾರ ಕೊಡಿಸಿ, ಸಹಾಯ ಮಾಡಿಕೊಡಬೇಕು ಎಂದು ನೊಂದ ಕುಟುಂಬಸ್ಥರು ಮನವಿ ಮಾಡಿದರು.