ಮೈಸೂರು: ಕೊರೊನಾ ಎಫೆಕ್ಟ್ನಿಂದ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ನ್ಯಾಯಾಧೀಶರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ ಪಾಲಾರ್ ಬಾಂಬ್ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.
1993ರಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾಲಾರ್ ಎಂಬ ಗ್ರಾಮದ ಸಮೀಪ ಕಾಡುಗಳ್ಳ ವೀರಪ್ಪನ್ (2004ರ ಆಕ್ಟೋಬರ್ 18ರಂದು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ) ಬಾಂಬ್ ಸಿಡಿಸಿ 22 ಜನರ ಸಾವು, 9ಮಂದಿಗೆ ಗಾಯಗೊಳಿಸಿದ್ದ. ಈ ಕೃತದಲ್ಲಿ 16 ವರ್ಷದ ಅಪ್ರಾಪ್ತೆಯಾಗಿದ್ದ ಶೆಲ್ಲ ಎಂಬಾಕೆ ಭಾಗಿಯಾಗಿದ್ದಾಳೆ ಎಂದು ಮಲೆ ಮಹದೇಶ್ವರ ಬೆಟ್ಟದ ಪೊಲೀಸರು ಈಕೆಯನ್ನು ಬಂಧಿಸಿ ಬಾಲಮಂದಿರದಲ್ಲಿ ಇಟ್ಟಿದ್ದರು.
ಅಲ್ಲಿಂದ ಪರಾರಿಯಾಗಿದ್ದ ಈಕೆಯನ್ನು ಮತ್ತೆ 27 ವರ್ಷಗಳ ನಂತರ ಕೊಳ್ಳೆಗಾಲ ಪೊಲೀಸರು 2020ರ ಜನವರಿ ತಿಂಗಳ ಅಂತ್ಯದಲ್ಲಿ ಬಂಧಿಸಿ ಮೈಸೂರು ನ್ಯಾಯಾಲಯದ ಕಸ್ಟಡಿಯಲ್ಲಿ ಇಟ್ಟಿದ್ದರು. ಮೈಸೂರಿನ ವಕೀಲ ಪಿ.ಪಿ.ಬಾಬುರಾಜ್ ಅವರು ಶೆಲ್ಲ ತಪ್ಪಿತಸ್ಥೆ ಅಲ್ಲ. ಆಕೆಗೆ ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು.
ನ್ಯಾಯಾಲಯವು ಏ.7ರಂದು ವಿಡಿಯೋ ಕಾನ್ಫೆರನ್ಸ್ ಮೂಲಕ ವಿಚಾರಣೆ ಮಾಡಿ ಜಾಮೀನು ಮಂಜೂರು ಮಾಡಿದೆ. ಏ.10ರಂದು ಜಾಮೀನು ಮಂಜೂರಿನಿಂದ ಮೈಸೂರು ಜೈಲಿನಿಂದ ಬಿಡುಗಡೆಯಾದ ಶೆಲ್ಲ ಗಂಡನೊಂದಿಗೆ ತೆರಳಿದಳು. ಶೆಲ್ಲ ಪರ ವಕಾಲತ್ತು ವಹಿಸಿದ ಪಿ.ಪಿ.ಬಾಬುರಾಜ್ 'ಈ ಟಿವಿ ಭಾರತ'ದೊಂದಿಗೆ ಮಾತನಾಡಿ, ವಿವರಣೆ ನೀಡಿದ್ದಾರೆ.