ಮೈಸೂರು : ಕೃಷಿ ಇಲ್ಲದೇ ಹೋದರೆ ದುರ್ಭಿಕ್ಷೆ ಎದುರಿಸಬೇಕಾಗುತ್ತದೆ ಎಂದು ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಮೈಸೂರು ತಾಲೂಕಿನ ತಳೂರು ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಉದ್ಯಮ ಕಡೆಗಣಿಸುವಂತದ್ದಲ್ಲ. ನಾವು ಭೂಮಿಯನ್ನು ನಂಬಿದರೆ ಅದು ನಮ್ಮನ್ನು ಕೈಬಿಡಲ್ಲ. ಸಮಗ್ರ ಕೃಷಿ ಪದ್ಧತಿ, ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಬೇಕು. ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳಬೇಕು. ಕೃಷಿಯೊಂದಿಗೆ ಉಪಕಸುಬುಗಳಾದ ಜಾನುವಾರು ಸಾಕಣೆ ಮತ್ತು ಜೇನು ಸಾಕಣೆಗೂ ಒತ್ತು ನೀಡಬೇಕು ಎಂದು ತಿಳಿಸಿ ಯಶಸ್ವಿ ಪ್ರಗತಿ ಪರ ರೈತರ ಯಶೋಗಾಥೆಗಳನ್ನು ರೈತರಿಗೆ ತಿಳಿಸಿ ಜಾಗೃತಿ ಮೂಡಿಸಿದರು. ಈ ವೇಳೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಕೃಷಿಯನ್ನು ಲಾಭದಾಯಕವಲ್ಲವೆಂದು ಪರಿಗಣಿಸಿ ನಗರ ಪಟ್ಟಣಗಳತ್ತ ಮುಖ ಮಾಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿ ಪುನಃ ಜನರನ್ನು ಗ್ರಾಮಗಳತ್ತ,ಕೃಷಿಯತ್ತ ಕರೆತರುವ ಉದ್ದೇಶದಿಂದ “ರೈತರೊಂದಿಗೆ ಒಂದು ದಿನ ಎಂಬ ವಿಶಿಷ್ಟ” ಕಾರ್ಯಕ್ರಮವನ್ನು ಜಾರಿ ಮಾಡಲಾಗಿದೆ ಎಂದರು.
ಕೃಷಿಯನ್ನು ಕಡೆಗಣಿಸುವ ಕಾಲ ಇದಾಗಿದ್ದು, ರೈತರು ಯುವಜನರಲ್ಲಿ ಆತ್ಮಸ್ಥೈರ್ಯ ತುಂಬಲು ಕೃಷಿ ಇಲಾಖೆ ಹಲವು ವಿನೂತನ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಅದರಲ್ಲಿ “ರೈತರೊಂದಿಗೆ ಒಂದು ದಿನ ಎಂಬ ವಿಶಿಷ್ಟ ಕಾರ್ಯಕ್ರಮವೂ ಒಂದು. ಈ ಕಾರ್ಯಕ್ರಮವನ್ನು 2020ರ ನವೆಂಬರ್ ಮಾಹೆಯಿಂದ ಜಾರಿಗೆ ತಂದಿದ್ದು, ರೈತರ ಸಮಸ್ಯೆಗಳನ್ನು ಕ್ಷೇತ್ರದ ಮಟ್ಟದಲ್ಲಿಯೇ ಪರಿಹರಿಸಿ ಸ್ಥಳದಲ್ಲೇ ವಿವಿಧ ಸೌಲಭ್ಯಗಳನ್ನು ನೀಡಬೇಕು ಎನ್ನುವ ಉದ್ದೇಶದಿಂದ “ರೈತರೊಂದಿಗೆ ಒಂದು ದಿನ” ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದರು.
ರೈತರ ಅಭಿವೃದ್ಧಿಗೆ ಹಲವು ಯೋಜನೆಗಳು : ಸರ್ಕಾರ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯ ಮೂಲಕ ವಿದ್ಯಾರ್ಥಿ ವೇತನ, ಕೃಷಿ ಯಾಂತ್ರೀಕರಣ ಯೋಜನೆ, ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆ ಮತ್ತಿತರ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೇ ಪ್ರಧಾನಮಂತ್ರಿಗಳ ಕೃಷಿ ಸಮ್ಮಾನ್ ಯೋಜನೆಯಡಿ ರಾಜ್ಯದ 53 ಲಕ್ಷ ಫಲಾನುಭವಿ ರೈತರ ಖಾತೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಒಟ್ಟು 10 ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೇರವಾಗಿ ವರ್ಗಾವಣೆ ಮಾಡಲಾಗಿದೆ.
ಜೊತೆಗೆ ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಕಾಲೇಜುಗಳಲ್ಲಿ ಕಳೆದ ವರ್ಷ ಇದ್ದ ರೈತರ ಮಕ್ಕಳ ಮೀಸಲಾತಿಯನ್ನು ಶೇ.40 ರಿಂದ ಶೇ.50 ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರದಿಂದಾಗಿ 186 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಪ್ರವೇಶಗಳು ದೊರೆತು ರೈತರ ಮಕ್ಕಳಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ. ತುಂತುರು ಮತ್ತು ಹನಿ ನೀರಾವರಿಗೆ ಗರಿಷ್ಠ ಸಬ್ಸಿಡಿಯನ್ನು ನೀಡುತ್ತಿದೆ. ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಒಟ್ಟಾರೆಯಾಗಿ ಕೃಷಿಯತ್ತ ಯುವಜನರನ್ನು ಪುನಃ ಕರೆತರಲು ಮತ್ತು ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಕೃಷಿ ಇಲಾಖೆ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೃಷಿ ಇಲಾಖೆ ಬದ್ಧವಾಗಿದೆ ಎಂದು ಇದೇ ವೇಳೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕೃಷಿ ಸಚಿವರಾದ ಬಿ ಸಿ ಪಾಟೀಲ್ ಅವರು ರೈತರಿಗೆಲ್ಲ ಏನಾದರೂ ಸಹಾಯ ಮಾಡಬೇಕು ಎನ್ನುವ ಹಂಬಲ ಇರುವವರು. ಇವರು ಪ್ರತಿ ಜಿಲ್ಲೆಗೂ ಕೂಡ ಎರಡರಿಂದ ಮೂರು ಸಾರಿ ಪ್ರವಾಸವನ್ನು ಮಾಡಿ ರೈತರ ಕಷ್ಟಗಳನ್ನು ಆಲಿಸಿ ಸ್ಧಳದಲ್ಲೇ ಅವರ ಸಮಸ್ಯೆ ಬಗೆಹರಿಸಿದ್ದಾರೆ ಎಂದರು.
ಕೃಷಿಕ್ಷೇತ್ರದಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ಸರಿಪಡಿಸುವಂತಹ ಹಾಗೂ ಕಚೇರಿಗಳಲ್ಲಿ ಏನಾದರೂ ತಪ್ಪಿದ್ದರೆ ಸರಿಪಡಿಸುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಕೃಷಿ ಸಚಿವರು ಮಾಡುತ್ತಾರೆ. ಅವರ ಕ್ಷೇತ್ರದಲ್ಲೂ ಕೂಡ ಸುಮಾರು 80 ಎಕರೆ ಪ್ರದೇಶದಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ. ರೈತರಿಗೋಸ್ಕರ ಯಶಸ್ವಿನಿ ಕಾರ್ಡ್ ಅನ್ನು ಮರು ಜಾರಿ ಮಾಡಲು ಚಾಲನೆ ಮಾಡುತ್ತಿದ್ದೇವೆ. ರೈತರ ಶ್ರೇಯೋಭಿವೃದ್ದಿಗೆ ಸರ್ಕಾರ ಸದಾ ಸಿದ್ಧ ಎಂದು ಅವರು ತಿಳಿಸಿದರು.
ಓದಿ : ಅಂತಿಮ ಹಂತಕ್ಕೆ ಬಿಜೆಪಿ ವಿಭಾಗೀಯ ಸಭೆ: ಇಂದು ಬೆಂಗಳೂರು ನಗರ ವಿಭಾಗದ ಸಂಘಟನಾತ್ಮಕ ಸಭೆ