ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹೊಸಹುಂಡಿ ಗ್ರಾಮದಲ್ಲಿದ್ದ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕದ ಮೇಲೆ ನಿನ್ನೆ ಹ್ಯೂಮನ್ ರೈಟ್ಸ್ ತಂಡ ದಾಳಿ ನಡೆಸಿತ್ತು. ನಕಲಿ ನಂದಿನಿ ತುಪ್ಪದ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಕುರಿತು ಮೈಮುಲ್ ಅಧಿಕಾರಿಗಳ ತಂಡ 'ಈ ಟಿವಿ ಭಾರತ' ದೊಂದಿಗೆ ಮಾತನಾಡಿದ್ದು, ಘಟನೆಯ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ.
ಮೈಮುಲ್ ಎಂಡಿ ವಿಜಯ್ ಕುಮಾರ್ ಮಾಹಿತಿ:
ನಕಲಿ ನಂದಿನಿ ತುಪ್ಪ ಉತ್ಪಾದನಾ ಘಟಕದ ಮೇಲಿನ ದಾಳಿ ಹೇಗಾಯಿತು ಎಂಬ ಬಗ್ಗೆ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಮೈಮುಲ್ ಎಂಡಿ ವಿಜಯ್ ಕುಮಾರ್, ಡಿಸೆಂಬರ್ 16ರಂದು ಎಂದಿನಂತೆ ಕಚೇರಿಗೆ ಆಗಮಿಸಿದಾಗ ಬೆಳಗ್ಗೆ 11:15ರ ವೇಳೆ ಹೊಸಹುಂಡಿ ಗ್ರಾಮದಿಂದ ಒಬ್ಬರು ಕರೆ ಮಾಡಿ ನಂದಿನಿ ತುಪ್ಪವನ್ನು ಕಲಬೆರಕೆ ಮಾಡಿ ಉತ್ಪಾದನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆಗ ನಾನು ಅಧ್ಯಕ್ಷರೊಂದಿಗೆ ಅನುಮೋದನೆ ಪಡೆದು ಕೂಡಲೇ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಹೋದೆವು. ಸ್ಥಳದಲ್ಲಿ ನಂದಿನಿ ತುಪ್ಪದಂತೆ ಕಾಣುವ ಕಲಬೆರಕೆ ಉತ್ಪನ್ನಗಳ ಪ್ಯಾಕೆಟ್ಗಳು ಸಿಕ್ಕವು. ಜೊತೆಗೆ ಡಾಲ್ಡಾ, ಪಾಮ್ ಆಯಿಲ್, ನಂದಿನಿ ಲೇಬಲ್ಗಳು, ಪ್ಯಾಕಿಂಗ್ ಮಷಿನ್, ನಂದಿನಿ ತುಪ್ಪದಂತೆ ಕಲರ್ ಬರುವಂತೆ ಮಾಡಲು ಉಪಯೋಗಿಸುತ್ತಿದ್ದ ಬಣ್ಣ ಸಿಕ್ಕಿತು. ಆಗ ಕಲಬೆರಕೆ ನಡೆಯುತ್ತಿರುವ ಕುರಿತು ಖಾತ್ರಿಯಾಯಿತು ಎಂದು ಮಾಹಿತಿ ನೀಡಿದರು.
ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದರು. ನಂತರ ಆಹಾರ ಸುರಕ್ಷತಾ ಇಲಾಖೆ ಅಂಕಿ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ತಿಳಿಸಿದ್ದು, ಅವರು ಕೂಡ ಬಂದರು. ಗೋಡೌನ್ ನಲ್ಲಿರುವ ಎಲ್ಲ ಉತ್ಪನ್ನಗಳನ್ನು ಪರಿಶೀಲಿಸಿ, ದಾಖಲಾತಿ ಮಾಡಿಕೊಂಡು ವಶಪಡಿಸಿಕೊಂಡರು.
ನಂತರ ಲಿಖಿತವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್ಪಿ ಅವರು ಸ್ಥಳಕ್ಕೆ ಬಂದು ಸ್ಥಳ ಪರಿಶೀಲಿಸಿ ಕೂಡಲೇ ಎಫ್ಐಆರ್ ದಾಖಲಿಸಿಕೊಂಡರು. ಈ ಕಲಬೆರಕೆ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ಮಾಡಿ, ಕ್ರಮ ಕೈಗೊಳ್ಳಿ ಎಂದು ಅವರಲ್ಲಿ ಮನವಿ ಮಾಡಿದ್ದಾಗಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ದೊಡ್ಡ ಮಟ್ಟದಲ್ಲಿ ಕಲಬೆರಕೆ ಮಾಡುತ್ತಿದ್ದಾರೆ ಎಂದರೆ ಪ್ಯಾಕಿಂಗ್ ಮೆಟಿರಿಯಲ್ ಉತ್ಪಾದನೆ ಮಾಡುವವರ ಸಂಪರ್ಕ ಇಟ್ಟುಕೊಂಡಿದ್ದಾರೆ. ಲೇಬಲ್ ತಯಾರಕರೊಂದಿಗೂ ಸಂಪರ್ಕ ಇಟ್ಟುಕೊಂಡಿದ್ದು, ಅಲ್ಲಿಂದಲೇ ನೇರವಾಗಿ ಖರೀದಿ ಮಾಡಿ ತಂದು ಇಟ್ಟುಕೊಂಡಿದ್ದಾರೆ.
ಪ್ರಾಥಮಿಕ ಹಂತದಲ್ಲಿ ನೋಡಿದಾಗ ನಂದಿನಿಗೆ ಸರಬರಾಜು ಮಾಡುವ ಪ್ಯಾಕಿಂಗ್ ಮೆಟಿರಿಯಲ್ ಕಂಪನಿಯಿಂದಲೇ ಪಡೆದಿರುವುದು ಕಂಡು ಬರುತ್ತಿದೆ. ತನಿಖೆಯಲ್ಲಿ ದೃಢವಾದ ಪ್ಯಾಕಿಂಗ್ ಮಟಿರಿಯಲ್ ಸರಬರಾಜು ಮಾಡುತ್ತಿರುವವರ ಮೇಲೆ ಕ್ರಮ ಕೈಗೊಂಡು ಅವರನ್ನು ಬ್ಲಾಕ್ ಲಿಸ್ಟ್ಗೆ ಸೇರ್ಪಡೆ ಮಾಡಲಾಗುವುದು ಎಂದು MD ವಿಜಯ್ ಕುಮಾರ್ ತಿಳಿಸಿದರು.
ಉನ್ನತ ಮಟ್ಟದ ತನಿಖೆಗೆ ಆಗ್ರಹ:
ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ನಂದಿನಿ ಉತ್ಪನ್ನದ ಮೇಲೆ ಇರುವ ವಿಶ್ವಾಸವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ವಿಶ್ವಾಸ ಉಳಿಸಿಕೊಳ್ಳುತ್ತೇವೆ. ಸ್ಥಳೀಯವಾಗಿ ನಮ್ಮ ಬ್ರಾಂಚ್ ಇಂದ ಪಾರ್ಲರ್ ಹಾಗೂ ಇತರ ಕಡೆ ವ್ಯತ್ಯಾಸಗಳು ಆಗಿಲ್ಲ. ಇವರು ದೊಡ್ಡ ಮಟ್ಟದಲ್ಲಿ ಒಂದೂವರೆ ತಿಂಗಳಿಂದೀಚಿಗೆ ಲಾಬಿ ಮಾಡುತ್ತಿದ್ದಾರೆ.
ಇದನ್ನು ನಾವು ಇಂದೇ ಕಡಿವಾಣ ಹಾಕಿ, ಉನ್ನತ ಮಟ್ಟದ ತನಿಖೆಯಾಗಬೇಕು. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಕೊಡಿಸಬೇಕು. ಇದಕ್ಕೆ ಸರ್ಕಾರ ಕೂಡ ಕೈಜೋಡಿಸಬೇಕು. ಪೊಲೀಸರ ತನಿಖೆಗೆ ನಾವು, ಆಡಳಿತ ಮಂಡಳಿ, ಅಧಿಕಾರಿ ವರ್ಗ ಏನೆಲ್ಲ ಸಹಕಾರ ನೀಡಬೇಕೋ ಅದನ್ನು ನೀಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಮೈಸೂರು: ನಕಲಿ ನಂದಿನಿ ತುಪ್ಪ ಘಟಕದ ಮೇಲೆ ದಾಳಿ!
ಒಂದೂವರೆ ತಿಂಗಳಿಂದೀಚೆಗೆ ಕಲಬೆರಕೆ ಮಾಡುತ್ತಿರುವುದಾಗಿ ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಬಹು ಸಮಯಗಳಿಂದ ಕಲಬೆರಕೆ ಮಾಡಿರಬಹುದು ಎಂದು ಸಂಶಯವಿದೆ. ಸಂಶಯ ಹೋಗಲಾಡಿಸಲು ಉನ್ನತ ಮಟ್ಟದ ತನಿಖೆ ಮಾಡಲು ಮನವಿ ಮಾಡುತ್ತಿದ್ದೇವೆ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ತಿಳಿಸಿದರು.