ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಅಸ್ಸೋಂನ ಗುವಾಹಟಿ ಮೃಗಾಲಯದಿಂದ ಒಂದು ಹೆಣ್ಣು ಘೇಂಡಾಮೃಗ, ಒಂದು ಕಪ್ಪು ಚಿರತೆ ಮತ್ತು ಒಂದು ಜೋಡಿ ಹೂಲಾಕ್ ಗಿಬ್ಬನ್ ಪ್ರಾಣಿಗಳನ್ನು ಪ್ರಾಣಿ ವಿನಿಮಯ ನಿಯಮದಡಿಯಲ್ಲಿ ತರಲಾಗಿದೆ.
ಎರಡು ಮೃಗಾಲಯಗಳು ಪ್ರಾಣಿ ವಿನಿಮಯ ಯೋಜನೆ ಅಡಿ ಪ್ರಾಣಿಗಳನ್ನು ವಿನಿಮಯ ಮಾಡಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಮೈಸೂರು ಮೃಗಾಲಯವು 11.5 ಅಡಿ ಎತ್ತರದ 'ಜಯಚಾಮರಾಜ' ಎಂಬ ಹೆಸರಿನ ಗಂಡು ಜಿರಾಫೆಯನ್ನು ಗುವಾಹಟಿ ಮೃಗಾಲಯಕ್ಕೆ ಕಳುಹಿಸಿಕೊಟ್ಟಿದೆ.
ರಸ್ತೆ ಮಾರ್ಗವಾಗಿ ಪ್ರಾಣಿಗಳನ್ನು ಕಾಳಜಿ ವಹಿಸಿ ಮೃಗಾಲಯಕ್ಕೆ ತರಲಾಗಿದ್ದು, ಇದರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಮೃಗಾಲಯದ ಸಹಾಯಕ ನಿರ್ದೇಶಕ ಡಾ. ಕೆ.ಆರ್.ರಮೇಶ್, ಪಶುವೈದ್ಯಾಧಿಕಾರಿ ಡಾ. ಕೆ.ವಿ.ಮದನ್, ವಲಯ ಅರಣ್ಯಾಧಿಕಾರಿ ಎ.ವಿ.ಸತೀಶ್, ಉಪ ವಲಯ ಅರಣ್ಯಾಧಿಕಾರಿ ಪಿ.ಒ.ಮಂಜುನಾಥ್, ಪ್ರಾಣಿ ವಿಭಾಗದ ಮೇಲ್ವಿಚಾರಕ ಎಂ.ಜಿ.ಉದಯ್ ಕುಮಾರ್, ಪ್ರಾಣಿಪಾಲಕರಾದ ಸಿ.ಮಧುಸೂದನ್, ವಿನೋದ್ ಕುಮಾರ್, ಎ.ಕೆ.ಕುಮಾರ್, ಸ್ವಾಮಿ ಮತ್ತು ಸಿ.ವಿ.ಸ್ವಾಮಿ ಅವರಿಗೆ ಮೃಗಾಲಯದ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.