ಮೈಸೂರು: ಮೂರು ದಿನದಲ್ಲಿ 35 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ನಂಜನಗೂಡು ತಾಲೂಕಿನ ಅರಿಯೂರು ಗ್ರಾಮ ಸೀಲ್ ಡೌನ್ ಮಾಡಲಾಗಿದೆ.
10 ದಿನಗಳ ಕಾಲ ಗ್ರಾಮದಿಂದ ಯಾರೂ ಹೊರಗೆ ಹೋಗದಂತೆ ಹಾಗೂ ಗ್ರಾಮಕ್ಕೆ ಯಾರೂ ಬಾರದಂತೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ ಗ್ರಾಮದ ಪ್ರಮುಖ ರಸ್ತೆಗಳನ್ನ ಬಂದ್ ಮಾಡಲಾಗಿದೆ.
ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಪರಿಶೀಲನೆ ನಡೆಸಿದಾಗ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಎರಡೇ ದಿನದಲ್ಲಿ 24 ಪ್ರಕರಣಗಳು ಪತ್ತೆಯಾಗಿವೆ. ಮೂರು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ 35ಕ್ಕೆ ತಲುಪಿದೆ. ಗ್ರಾಮದ ಜನರು ಬೆಂಗಳೂರು ಹಾಗೂ ರಾಮನಗರಕ್ಕೆ ಕೂಲಿ ಕೆಲಸಕ್ಕಾಗಿ ತೆರಳಿದ್ದು, ವಾಪಸ್ ಗ್ರಾಮಕ್ಕೆ ಬಂದಾಗ ಸೋಂಕು ಕಾಣಿಸಿಕೊಂಡಿದೆ.
ಗ್ರಾಮದಲ್ಲಿರುವ 300 ಜನಸಂಖ್ಯೆ ಪೈಕಿ 35 ಮಂದಿಗೆ ಪಾಸಿಟಿವ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಡ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅರಿಯೂರು ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟು ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.